ತುಮಕೂರು:ದೇಶಕ್ಕೆ ತ್ರಿವಿಧ ದಾಸೋಹ ನೀಡುತ್ತಿರುವ ನಾಡಿನ ಪ್ರಸಿದ್ಧ ತುಮಕೂರಿನ ಸಿದ್ದಗಂಗಾ ಮಠದ ಉತ್ತರಾಧಿಕಾರಿ ಪಟ್ಟಾಭಿಷೇಕ ಕಾರ್ಯಕ್ರಮ ಇಂದು ಸರಳವಾಗಿ ನೆರವೇರಿತು. ಸಭಾ ಕಾರ್ಯಕ್ರಮದಲ್ಲಿ ಮಠದ ಉತ್ತರಾಧಿಕಾರಿಗೆ ನೂತನ ಅಭಿದಾನ ನೀಡಲಾಯಿತು. ಈ ಮೂಲಕ ಸಿದ್ದಗಂಗಾ ಮಠದ ಉತ್ತರಾಧಿಕಾರಿಯಾಗಿ ಶಿವ ಸಿದ್ದೇಶ್ವರವ ಸ್ವಾಮೀಜಿ (ಪೂರ್ವಾಶ್ರಮದ ಹೆಸರು ಮನೋಜ್ ಕುಮಾರ್) ಎಂದು ಘೋಷಣೆ ಮಾಡಲಾಯಿತು.
ಮೂವರಿಗೆ ಉತ್ತರಾಧಿಕಾರಿ ಪಟ್ಟಾಭಿಷೇಕ: ಅದೇ ರೀತಿ ಬಂಡೇ ಮಠದ ಉತ್ತರಾಧಿಕಾರಿಯಾಗಿ ಮಹಾಲಿಂಗ ಸ್ವಾಮೀಜಿ (ಪೂರ್ವಾಶ್ರಮದ ಹೆಸರು ಹರ್ಷ), ದೇವನಹಳ್ಳಿಯ ಬಸವ ಕಲ್ಯಾಣ ಮಠದ ಉತ್ತರಾಧಿಕಾರಿಯಾಗಿ ಸದಾಶಿವ ಸ್ವಾಮೀಜಿ (ಪೂರ್ವಾಶ್ರಮದ ಹೆಸರು ಗೌರಿಶ್ ಕುಮಾರ್) ಎಂದು ಸಭೆಯಲ್ಲಿ ವಿವಿಧ ಮಠಾಧ್ಯಕ್ಷರು ಹಾಗೂ ಮಠದ ಪ್ರಮುಖರು ಘೋಷಿಸಿದರು. ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲು ಸಿದ್ದಗಂಗಾ ಮಠದ ಆಡಳಿತ ಮಂಡಳಿ ನಿರ್ಧರಿಸಿತ್ತು. ನೂತನವಾಗಿ ಆಯ್ಕೆಯಾಗಿರುವ ಮೂವರಿಗೂ ಇಂದು ಉತ್ತರಾಧಿಕಾರಿ ಪಟ್ಟಾಭಿಷೇಕ ಮಾಡಲಾಯಿತು.
ಸಿದ್ದಗಂಗಾ ಮಠದ ಆಡಳಿತ ಮಂಡಳಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಂದು ಬಸವ ಜಯಂತಿ ಹಿನ್ನೆಲೆ ಮಠದಲ್ಲಿ ಆಯೋಜಿಸಲಾಗಿದ್ದ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಮಠದ ಭಕ್ತರು, ಸಾರ್ವಜನಿಕರು ಹಾಗೂ ಹಿತೈಷಿಗಳು ಭಾಗಿಯಾಗಿದ್ದರು. ಬೆಳಗ್ಗೆಯಿಂದಲೇ ಶಿವಕುಮಾರ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮ ನೆರವೇರಿಸಲಾಯಿತು. ಸಿದ್ದಗಂಗಾ ಮಠದ ಜಂಗಮ ಪಟ್ಟಾಧಿಕಾರ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಸುತ್ತೂರು ಶ್ರೀಗಳು ಉದ್ಘಾಟಿಸಿದರು. ವಿಶೇಷ ಸಮಾರಂಭದಲ್ಲಿ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ಅನೇಕ ಮಠಾಧೀಶರು ಭಾಗಿಯಾಗಿದ್ದರು.
ಇದನ್ನೂ ಓದಿ:ನಾಳೆ ಸಿದ್ದಗಂಗಾ ಮಠದ ಉತ್ತರಾಧಿಕಾರಿಗೆ ಪಟ್ಟಾಭಿಷೇಕ.. ನೀತಿ ಸಂಹಿತೆ ಹಿನ್ನೆಲೆ ಸರಳ ಕಾರ್ಯಕ್ರಮ