ತುಮಕೂರು:ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ತುಮಕೂರಿನ ಸಿದ್ದಗಂಗಾ ಮಠದಲ್ಲಿ ನಾಳೆ ನಡೆಯಲಿರುವ ನೂತನ ಉತ್ತರಾಧಿಕಾರಿ ಪಟ್ಟಾಭಿಷೇಕ ಮಹೋತ್ಸವ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲು ಮಠದ ಆಡಳಿತ ಮಂಡಳಿ ನಿರ್ಧರಿಸಿದೆ. ಈ ಕಾರ್ಯಕ್ರಮಕ್ಕೆ ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಜನಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇಲ್ಲ. ಕೇವಲ ಮಠದ ಭಕ್ತರು ಹಾಗೂ ವಿವಿಧ ಮಠಾಧೀಶರುಗಳು ಮಾತ್ರ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸಿದ್ದಗಂಗಾ ಹಳೆಯ ಮಠದ ಆವರಣದಲ್ಲಿ ಸಮಾರಂಭ:ಮನೋಜ್ ಕುಮಾರ್ ಅವರನ್ನು ಸಿದ್ದಗಂಗಾ ಮಠದ ನೂತನ ಉತ್ತರಾಧಿಕಾರಿಯನ್ನಾಗಿ ನೇಮಿಸಲಾಗುತ್ತಿದ್ದು, ಶ್ರೀ ಶಿವಕುಮಾರ ಸ್ವಾಮೀಜಿಯವರ ಶಿಷ್ಯರಾಗಿಯೂ ಸಹ ಮನೋಜ್ ಕುಮಾರ್ ಗುರುತಿಸಿಕೊಂಡಿದ್ದರು. 23ರಂದು ಭಾನುವಾರ ಬೆಳಗ್ಗೆ 5 ಗಂಟೆಗೆ ಸಿದ್ದಗಂಗಾ ಮಠದಲ್ಲಿ ಪಟ್ಟಾಭಿಷೇಕ ಕಾರ್ಯಕ್ರಮದ ವಿಧಿ ವಿಧಾನಗಳಿಗೆ ಚಾಲನೆ ನೀಡಲಾಗುತ್ತದೆ. ಇನ್ನು ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಪಟ್ಟಾಭಿಷೇಕ ಕಾರ್ಯಕ್ರಮದ ಸರ್ವಸಿದ್ಧತೆ ಮಾಡಿಕೊಳ್ಳಲಾಗಿದೆ. ಸಿದ್ದಗಂಗಾ ಹಳೆಯ ಮಠದ ಆವರಣದಲ್ಲಿ ಸಮಾರಂಭ ನಡೆಸಲಾಗುತ್ತಿದ್ದು, ಸೀಮಿತ ವ್ಯಕ್ತಿಗಳಿಗೆ ಮಾತ್ರ ಆಹ್ವಾನ ನೀಡಲಾಗಿದೆ.
ಇನ್ನು ಸರಳವಾಗಿ ಈ ಸಮಾರಂಭ ಆಯೋಜನೆ ಮಾಡಲಾಗುತ್ತಿದ್ದು, ಮಠದ ಭಕ್ತಾದಿಗಳು ಸಹಕಾರ ನೀಡಬೇಕು ಎಂದು ಮಠದ ಆಡಳಿತ ಮಂಡಳಿ ಮನವಿ ಮಾಡಿದೆ. ಪ್ರಸ್ತುತ ಸಿದ್ದಗಂಗಾ ಮಠದಲ್ಲಿ ಶ್ರೀ ಸಿದ್ದಲಿಂಗ ಸ್ವಾಮೀಜಿ ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದ್ದು, ನಡೆದಾಡುವ ದೇವರು ಶಿವಕುಮಾರ ಶ್ರೀಗಳ ಶಿಷ್ಯ ಮನೋಜ್ ಕುಮಾರ್ ಅವರನ್ನು ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಲಾಗಿದೆ. ಇವರನ್ನು ಅಕ್ಷಯ ತೃತೀಯ ದಿನ ಏ.23ರ ಭಾನುವಾರ ನಿರಂಜನ ಪಟ್ಟಾಧಿಕಾರ ಮತ್ತು ಉತ್ತರಾಧಿಕಾರಿ ಆಗಿ ನೇಮಕ ಮಾಡಲಾಗುವುದು ಎಂದು ಈಗಾಗಲೇ ಮಠದ ಕಾರ್ಯದರ್ಶಿ ತಿಳಿಸಿದ್ದಾರೆ. ತುಮಕೂರಿನ ಸಿದ್ದಗಂಗಾ ಮಠ ದೇಶದಲ್ಲಿಯೇ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದು ಪ್ರಸ್ತುತ ಸುಮಾರು 10 ಸಾವಿರ ವಿದ್ಯಾರ್ಥಿಗಳು ಮಠದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.