ತುಮಕೂರು: ಮೈಸೂರಿನ ರೈಲ್ವೆ ನಿಲ್ದಾಣದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಹಿನ್ನೆಲೆಯಲ್ಲಿ ಮೈಸೂರಿನಿಂದ ಹೊರಡುವ ಕೆಲವು ರೈಲುಗಳ ಸಂಚಾರ ರದ್ದುಗೊಳಿಸಿದ್ದು ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ಅಲ್ಲದೇ, ಪ್ರಯಾಣಿಕರಿಗೆ ಅನ್ಯ ವ್ಯವಸ್ಥೆ ಕೂಡ ಕಲ್ಪಿಸಿದ ಕಾರಣ ಆಕ್ರೋಶ ವ್ಯಕ್ತವಾಗಿದೆ.
ಬೆಂಗಳೂರಿನಿಂದ ಅರಸೀಕೆರೆ, ಶಿವಮೊಗ್ಗ ಹಾಗೂ ತಾಳಗುಪ್ಪ ಕಡೆಗೆ ತೆರಳುವ ರೈಲುಗಳನ್ನು ಜೂ. 16ರಿಂದ 23ರ ವರೆಗೆ 8 ದಿನಗಳ ಕಾಲ ಸಂಚಾರವನ್ನು ರೈಲ್ವೆ ಇಲಾಖೆ ಸ್ಥಗಿತಗೊಳಿಸಿದೆ. ಬೆಂಗಳೂರಿನಿಂದ ಸಂಜೆ ಹೊರಡುವ ಅರಸೀಕೆರೆ ಪ್ಯಾಸೆಂಜರ್ ಮತ್ತು ರಾತ್ರಿ ಹೊರಡುವ ತಾಳಗುಪ್ಪ ಎಕ್ಸಪ್ರೆಸ್ ರೈಲು ಕೂಡ ಸ್ಥಗಿತಗೊಂಡಿದ್ದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರೈಲುಗಳ ಸಂಚಾರ ರದ್ದುಗೊಳಿಸಿದ್ದರಿಂದ ಪ್ರಯಾಣಿಕರ ಪರದಾಟ ಅರಸೀಕೆರೆ, ತಿಪಟೂರು, ತುಮಕೂರಿನಿಂದ ಬೆಂಗಳೂರಿಗೆ ಪ್ರತಿನಿತ್ಯ ಸಾವಿರಾರು ಜನರು ಸಂಚರಿಸುತ್ತಾರೆ. ಮತ್ತೆ ಸಂಜೆಯಾದೊಡನೆ ಇವೇ ರೈಲಿನಲ್ಲಿ ವಾಪಸಾಗುತ್ತಾರೆ. ರೈಲುಗಳ ಸಂಚಾರವನ್ನು ಕೆಲವು ದಿನಗಳ ಮಟ್ಟಿಗೆ ರದ್ದುಪಡಿಸಿರುವುದರಿಂದ ಬಹುಮುಖ್ಯವಾಗಿ ಉದ್ಯೋಗಿಗಳಿಗೆ ಮತ್ತು ವ್ಯಾಪಾರಸ್ಥರಿಗೆ ತೀವ್ರ ತೊಂದರೆಯಾಗಲಿದೆ. ವಿಶೇಷವಾಗಿ ಬೆಂಗಳೂರಿಗೆ ನಿತ್ಯ ಹೋಗುವ ಸಾವಿರಾರು ಜನರಿಗೆ ಸಾಕಷ್ಟು ಅನಾನುಕೂಲವಾಗಲಿದೆ.
ಈ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬೆಂಗಳೂರು-ಅರಸೀಕೆರೆ-ತಾಳಗುಪ್ಪ ನಡುವೆ ರೈಲು ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ತುಮಕೂರು-ಬೆಂಗಳೂರು ರೈಲ್ವೆ ಪ್ರಯಾಣಿಕರ ವೇದಿಕೆ ಒತ್ತಾಯಿಸಿದೆ.
ಕಾಮಗಾರಿ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ತೊಂದರೆಯಾಗಲಿದೆ. ಬೇರೆ ವ್ಯವಸ್ಥೆ ಕಲ್ಪಿಸುವ ಬಗ್ಗೆ ಕನಿಷ್ಠ ಮಾಹಿತಿ ಕೂಡ ನೈರುತ್ಯ ರೈಲ್ವೆ ವಲಯದ ಅಧಿಕಾರಿಗಳ ಗಮನಕ್ಕೆ ಬಾರದಿರುವುದು ವಿಪರ್ಯಾಸವಾಗಿದೆ ಎಂದು ರೈಲ್ವೆ ಪ್ರಯಾಣಿಕರ ವೇದಿಕೆ ಅಧ್ಯಕ್ಷ ಕರಣಂ ರಮೇಶ್ ವಿಷಾದ ವ್ಯಕ್ತಪಡಿಸಿದ್ದಾರೆ.