ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕಿನ ಕೋಟೆಗಿರಿ ಗ್ರಾಮದಲ್ಲಿ ರಾಜ ಚೋಳ-1 ವಂಶಸ್ಥರು 949 ವರ್ಷಗಳ ಹಿಂದೆ ನಿರ್ಮಿಸಿದ್ದ ದೇವಾಲಯದ ಕುರುಹು ಇಲ್ಲವಾಗಿದ್ದು, ಜತೆಗೆ ವಿಗ್ರಹವೂ ನಾಪತ್ತೆಯಾಗಿದೆ ಎಂದು ತಮಿಳುನಾಡಿನ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ತಮಿಳುನಾಡು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಇದರ ಬೆನ್ನಲ್ಲೇ ಈಗ ಇತಿಹಾಸ ತಜ್ಞರು ಈ ದೇಗುಲದ ಕುರುಹುಗಳ ಪತ್ತೆ ಕಾರ್ಯಕ್ಕೆ ಮುಂದಾಗಿದ್ದಾರೆ. ಆದರೆ, ಪ್ರಾಚ್ಯ ವಸ್ತು ಹಾಗೂ ಪುರಾತತ್ವ ಇಲಾಖೆ ಬಳಿ ಈ ಕುರಿತು ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲ ಎಂದು ತಿಳಿದು ಬಂದಿದೆ. ನಾಪತ್ತೆಯಾಗಿರುವ ಈ ದೇವಾಲಯಯನ್ನು ಕರ್ನಾಟಕ ಸರ್ಕಾರದ ಸಹಕಾರದೊಂದಿಗೆ ಪತ್ತೆ ಮಾಡಲು ಮುಂದಾಗಬೇಕು ಎಂದು ತಮಿಳುನಾಡಿನ ಮಾಜಿ ಇನ್‌ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ) ಎ.ಜಿ. ಪೊನ್ ಮಾಣಿಕ್ಕವೆಲ್ ತಮಿಳುನಾಡು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪತ್ರದಲ್ಲಿ, ರಾಜರಾಜ ಚೋಳ-1 ಅವರ ಮೊಮ್ಮಗ ಹಾಗೂ ರಾಜೇಂದ್ರ ಚೋಳ-1 ಅವರ ಪುತ್ರ ಉದಯರ್ ರಾಜಾಧಿ ರಾಜ ದೇವರು-1 ಕುಣಿಗಲ್‌ನಲ್ಲಿ ರಾಜೇಂದ್ರ ಚೋಳಪುರಂ ಎಂಬ ಪಟ್ಟಣವನ್ನು ಸ್ಥಾಪಿಸಿದ್ದರು. 949 ವರ್ಷಗಳ ಹಿಂದೆ ಕುಣಿಗಲ್‌ನಿಂದ 5 ಕಿ. ಮೀ. ದೂರದಲ್ಲಿರುವ ಕೋಟೆಗಿರಿ ಗ್ರಾಮದಲ್ಲಿ ತಮ್ಮ ತಂದೆಯ ನೆನಪಿಗಾಗಿ ರಾಜೇಂದ್ರ ಚೋಳೀಶ್ವರಂ ಎಂಬ ದೇವಾಲಯವನ್ನು ನಿರ್ಮಿಸಲಾಗಿತ್ತು.