ತುಮಕೂರು: ಶಿರಾ ನಗರದಲ್ಲಿ ಇತ್ತೀಚೆಗೆ ಕೋಮು ಸೌಹಾರ್ದತೆಯನ್ನು ಕದಡುವ ಯತ್ನ ನಡೆದಿತ್ತು. ಹೀಗಾಗಿ ಕೋಮು ಗಲಭೆ ನಡೆಯುವ ಶಂಕೆ ವ್ಯಕ್ತವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದೆ.
ಕೋಮು ಸೌಹಾರ್ದ ಕದಡುವ ಹುನ್ನಾರ: ಶಿರಾ ನಗರದಲ್ಲಿ ಭದ್ರತಾ ಪಡೆ ಮೊಕ್ಕಾಂ - ಶಿರಾ ಸುದ್ದಿ,
ತುಮಕೂರು ಜಿಲ್ಲೆಯ ಶಿರಾದಲ್ಲಿ ಕೋಮು ಸೌಹಾರ್ದತೆಯನ್ನು ಕದಡುವ ಯತ್ನ ನಡೆದಿದ್ದು, ಸ್ಥಳದಲ್ಲಿ ಭದ್ರತಾ ಪಡೆ ಮೊಕ್ಕಾಂ ಹೂಡಿದೆ.
ಬುಧವಾರ ಕೈಗಾರಿಕ ಭದ್ರತಾ ಪಡೆ (ಕ್ಯೂ.ಆರ್.ಟಿ ಪಡೆ) ಹಾಗೂ ಶಿರಾ ಪೊಲೀಸ್ ಠಾಣೆಯ ನೂರಕ್ಕೂ ಹೆಚ್ಚು ಸಿಬ್ಬಂದಿ ನಗರದಲ್ಲಿ ಪಥಸಂಚಲನ ನಡೆಸಿದರು. ಬೆಳಗ್ಗೆ ನಗರದ ದರ್ಗಾ ಸರ್ಕಲ್ನಲ್ಲಿ ಪ್ರಾರಂಭಗೊಂಡ ಪಥಸಂಚಲನ ಶಿರಾ ನಗರದ ಪ್ರಮುಖ ರಸ್ತೆಗಳಲ್ಲಿ ಹಾಗೂ ಆಯಕಟ್ಟಿನ ಪ್ರದೇಶಗಳಲ್ಲಿ ಗಸ್ತು ತಿರುಗಿತು.
ಈ ಪಥಸಂಚಲನ ನಗರದಾದ್ಯಂತ ಸಾರ್ವಜನಿಕರಲ್ಲಿ ತೀವ್ರ ಸಂಚಲನ ಉಂಟುಮಾಡಿದೆ. ಸುಮಾರು 6 ಕಿ.ಮೀ.ಗಳಷ್ಟು ದೂರ ಪರೇಡ್ ನಡೆದು, ಜನರ ಗಮನ ಸೆಳೆಯಿತು. ಅಲ್ಲದೇ, ಇನ್ನೂ ಅನೇಕ ದಿನಗಳ ಕಾಲ ಶಿರಾ ನಗರದಲ್ಲಿ ಭದ್ರತಾ ಪಡೆ ಗಸ್ತು ತಿರುಗಿ ಮೊಕ್ಕಾಂ ಹೂಡಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಈಟಿವಿ ಭಾರತಕ್ಕೆ ತಿಳಿಸಿದರು.