ತುಮಕೂರು:ಗ್ಯಾಸ್ ಕಟ್ಟರ್ ಬಳಸಿ ರಾತ್ರೋರಾತ್ರಿ ಜ್ಯುವೆಲ್ಲರಿ ಶಾಪ್ಗೆ ಕನ್ನ ಹಾಕಿದ ಕಳ್ಳರು, ಸುಮಾರು ಐದು ಲಕ್ಷ ರೂಪಾಯಿ ಬೆಲೆ ಬಾಳುವ ಅಂದಾಜು 6 ಕೆ.ಜಿ ಬೆಳ್ಳಿ ವಸ್ತುಗಳನ್ನು ದೋಚಿ ಪರಾರಿಯಾಗಿರುವ ಘಟನೆ ಗುಬ್ಬಿ ತಾಲೂಕಿನ ಕೆ.ಜಿ.ಟೆಂಪಲ್ ಗ್ರಾಮದಲ್ಲಿ ನಡೆದಿದೆ. ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಜಿ.ಟೆಂಪಲ್ ಗ್ರಾಮದ ಮೋಹನ್ ಲಾಲ್ ಮಾಲೀಕತ್ವದ ಭವಾನಿ ಜ್ಯುವೆಲ್ಲರಿ ಶಾಪ್ನಲ್ಲಿ ಕಳ್ಳತನ ನಡೆದಿದೆ.
ರಾತ್ರಿ ಒಂದು ಗಂಟೆ ಸಮಯದಲ್ಲಿ ಅಂಗಡಿ ಮಾಲೀಕ ಮೋಹನ್ ಲಾಲ್ ಮೊಬೈಲ್ಗೆ ಅಲಾರ್ಮ್ ಸೆನ್ಸಾರ್ ಎಚ್ಚರಿಕೆ ಕೊಟ್ಟಿದ್ದು ಹೆಣ್ಣೂರು ನಿವಾಸಿ ಅಂಗಡಿ ಮಾಲೀಕ ತಕ್ಷಣ ಕೆ.ಜಿ.ಟೆಂಪಲ್ ಸ್ನೇಹಿತರಿಗೆ ಮಾಹಿತಿ ತಿಳಿಸಿದ್ದಾರೆ. ಕೂಡಲೇ ಅಂಗಡಿ ಬಳಿ ಬಂದವರು ಗಲಾಟೆ ಮಾಡಲಾಗಿ ಹಿಂಬದಿಯಿಂದ ಕಳ್ಳರು ಓಡಿ ಹೋಗಿದ್ದಾರೆ ಎನ್ನಲಾಗಿದೆ.
ತಡರಾತ್ರಿ ಜ್ಯುವೆಲ್ಲರಿ ಶಾಪ್ಗೆ ನುಗ್ಗಿರುವ ಆರೇಳು ಮಂದಿ ಮುಸುಕುಧಾರಿಗಳ ಗುಂಪಿನ ಚಲನವಲನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಜ್ಯುವೆಲ್ಲರಿ ಶಾಪ್ನಲ್ಲಿದ್ದ ಸುಮಾರು ಆರೇಳು ಕೆ.ಜಿ. ಬೆಳ್ಳಿ ವಸ್ತುಗಳನ್ನು ದೋಚಿಕೊಂಡು ಹೋಗಿರುವ ಪ್ರಕರಣ ನಡೆದಿದೆ. ಈ ಮಧ್ಯೆ ಚಿನ್ನಾಭರಣ ಲಾಕರ್‌ನಲ್ಲಿದ್ದ ಕಾರಣ ಲಕ್ಷಾಂತರ ಬೆಲೆಯ ಬಂಗಾರ ಒಡವೆಗಳು ಉಳಿದುಕೊಂಡಿದೆ.
ಸ್ಥಳಕ್ಕೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿ.ಎಸ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕಳ್ಳರಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.
ಮಾಲೀಕನಿಗೆ ಗುಂಡು ಹಾರಿಸಿ, ಜ್ಯುವೆಲ್ಲರಿ ದರೋಡೆ:ಚಿನ್ನದ ಅಂಗಡಿ ಮಾಲೀಕನ ಮೇಲೆ ಗುಂಡು ಹಾರಿಸಿ, ಸುಮಾರು 1 ಕೆಜಿ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದ ಘಟನೆ ಇತ್ತೀಚೆಗೆ ಬೆಂಗಳೂರಿನ ಬ್ಯಾಡರಹಳ್ಳಿಯ ಪೈಪ್‌ಲೈನ್ ರಸ್ತೆಯಲ್ಲಿ ನಡೆದಿತ್ತು. ಹೈದರಾಬಾದ್ಗೆ ವಿಮಾನ ಹತ್ತುವ ಯತ್ನದಲ್ಲಿದ್ದ ಈ ಪ್ರಕರಣದ ಆರೋಪಿಯೋರ್ವನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಆತನಿಂದ ಸ್ವಲ್ಪ ಪ್ರಮಾಣದ ಚಿನ್ನಾಭರಣ ವಶಕ್ಕೆ ಪಡೆದಿದ್ದರು.
ದ್ವಿಚಕ್ರ ವಾಹನಗಳಲ್ಲಿ ಮಾರಕಾಸ್ತ್ರಗಳಸಹಿತ ಬಂದಿದ್ದ ಆರೋಪಿಗಳು ಬ್ಯಾಡರಹಳ್ಳಿ ವ್ಯಾಪ್ತಿಯ ವಿನಾಯಕ ಜ್ಯುವೆಲ್ಲರಿ ಶಾಪ್ಗೆ ನುಗ್ಗಿ, ಮಾಲೀಕ ಮನೋಜ್ ಲೋಹರ್ ಅವರನ್ನು ಬೆದರಿಸಿ, ದರೋಡೆಗೆ ಯತ್ನಿಸಿದ್ದರು. ಮನೋಜ್ ಅವರು, ದರೋಡೆಕೋರರನ್ನು ತಡೆಯಲು ಯತ್ನಿಸಿದಾಗ ಮಾಲೀಕನ ತೊಡೆಗೆ ಗುಂಡು ಹಾರಿಸಿ, ಆರೋಪಿಗಳು ಅಂಗಡಿಯಲ್ಲಿದ್ದ ಸುಮಾರು 1 ಕೆಜಿಯಷ್ಟು ಚಿನ್ನಾಭರಣ ದೋಚಿದ್ದರು. ಮಾಲೀಕನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದರು.
ಇದನ್ನೂ ಓದಿ:ಜ್ಯುವೆಲ್ಲರಿ ಶಾಪ್ ದರೋಡೆ ಪ್ರಕರಣ: ಹೈದರಾಬಾದ್ನತ್ತ ಹೊರಟಿದ್ದ ಆರೋಪಿ ಸೆರೆ