ತುಮಕೂರು: ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಸಿದ್ದಗಂಗಾ ಮಠಕ್ಕೆ ಬಂದಿದ್ದ ವಿದ್ಯಾರ್ಥಿಯಲ್ಲಿ ಕೊರೊನಾ ಸೋಂಕು ಇಲ್ಲ ಎಂಬುದು ದೃಢವಾಗಿದೆ ಎಂದು ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಸೋಂಕು ಇದೆ ಎಂಬ ವಿಷಯ ದಟ್ಟವಾಗಿತ್ತು. ಹೀಗಾಗಿ ಇದಕ್ಕೆ ಸಂಬಂಧಪಟ್ಟಂತೆ ಜಿಲ್ಲಾಡಳಿತ ವಿದ್ಯಾರ್ಥಿಯನ್ನು ಕರೆದುಕೊಂಡು ಹೋಗಿ ಪರೀಕ್ಷಿಸಿದೆ. ಈಗ ಆತನಲ್ಲಿ ಯಾವುದೇ ರೀತಿಯ ಸೋಂಕು ಇಲ್ಲ ಎಂಬುದು ಸ್ಪಷ್ಟವಾಗಿದೆ. ಅಲ್ಲದೇ ಈ ವಿದ್ಯಾರ್ಥಿ ತಂಗಿದ್ದಂತಹ ಕೊಠಡಿಯಲ್ಲಿದ್ದ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ಅವರಲ್ಲಿಯೂ ನೆಗೆಟಿವ್ ಬಂದಿದೆ ಎಂದರು.
ವಿದ್ಯಾರ್ಥಿಯಲ್ಲಿ ಸೋಂಕು ಇಲ್ಲವೆಂದು ಸ್ಪಷ್ಟನೆ ನೀಡಿದ ಶ್ರೀ ಸಿದ್ದಲಿಂಗ ಸ್ವಾಮೀಜಿ ಲಾಕ್ಡೌನ್ ವೇಳೆ 1000 ಮಕ್ಕಳು ಮಠದಿಂದ ಮನೆಗೆ ತೆರಳಿದ್ದರು. ಅವರು ಇದ್ದಲ್ಲಿಯೇ ಪರೀಕ್ಷೆ ಬರೆಯಲು ಅವಕಾಶವಿದೆ ಎಂದು ಹೇಳಲಾಗಿತ್ತು. ಆದರೂ ಕೂಡ ಮಠದಲ್ಲಿ ಪರೀಕ್ಷೆ ಬರೆಯಲು ಇಚ್ಛಿಸುವ ವಿದ್ಯಾರ್ಥಿಗಳು ಜೂನ್ 15ರೊಳಗೆ ಮಠಕ್ಕೆ ಬರುವಂತೆ ಸೂಚಿಸಲಾಗಿತ್ತು. ಅದರಂತೆ ಶೇಕಡ 99 ರಷ್ಟು ಮಕ್ಕಳು ಬಂದಿದ್ದರು. ಯಾರೂ ಕೂಡ ಇದನ್ನು ತಪ್ಪಾಗಿ ಪ್ರಚಾರ ಮಾಡಕೂಡದು. ಎಲ್ಲಾ ವಿದ್ಯಾರ್ಥಿಗಳು ಆರೋಗ್ಯವಾಗಿದ್ದಾರೆ. ವಿದ್ಯಾರ್ಥಿಗಳ ಪೋಷಕರು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಇದಕ್ಕೆ ಸಂಬಂಧಪಟ್ಟಂತೆ ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಿಂದ ಬಂದಂತಹ ಎಸ್ಎಸ್ಎಲ್ಸಿ ವಿದ್ಯಾರ್ಥಿಯನ್ನು ಸತತವಾಗಿ ಮೂರು ಬಾರಿ ಗಂಟಲು ದ್ರವದ ಸ್ಯಾಂಪಲ್ ತೆಗೆದು ಪರೀಕ್ಷಿಸಲಾಗಿದೆ. ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಇರುವ ಕೋವಿಡ್ -19 ಪರೀಕ್ಷೆ ಘಟಕದಲ್ಲಿ ನಿರಂತರವಾಗಿ ಪರೀಕ್ಷೆ ನಡೆಸಿದಾಗ ನೆಗೆಟೀವ್ ಕಂಡುಬಂದಿದೆ. ಹೀಗಾಗಿ ಪೋಷಕರು, ವಿದ್ಯಾರ್ಥಿಗಳು ಆತಂಕಪಡುವ ಅಗತ್ಯವಿಲ್ಲ. ಮಠದಲ್ಲಿ ಮುಂಜಾಗ್ರತಾ ಕ್ರಮವಾಗಿ ನೋಡಲ್ ಅಧಿಕಾರಿ ಒಬ್ಬರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.