ತುಮಕೂರು:ಕೇಂದ್ರ ಸರ್ಕಾರ ದೇಶವನ್ನು ಮಾರಾಟ ಮಾಡಲು ಹೊರಟಿದ್ದು, ಬಂಡವಾಳಶಾಹಿಗಳು ಪಾಲುದಾರರಾಗಿದ್ದಾರೆ. ಹಾಗಾಗಿ ಕೈಗಾರಿಕೆಗಳು, ಕಾರ್ಮಿಕರು ಬೀದಿ ಪಾಲಾಗುತ್ತಿದ್ದಾರೆ ಎಂದು ಸಿಐಟಿಯುನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸಿಐಟಿಯು 14 ನೇ ರಾಜ್ಯ ಮಟ್ಟದ ಸಮ್ಮೇಳನದ ಬಹಿರಂಗ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಆರ್ಥಿಕ ಕುಸಿತದಿಂದ ಉದ್ದಿಮೆಗಳು, ಕೈಗಾರಿಕೆಗಳು ಬಾಗಿಲು ಮುಚ್ಚಿದ್ದು, ದುಡಿಯುವ ವರ್ಗ ತತ್ತರಿಸಿ ಹೋಗಿದೆ. ಸಂಘಟಿತ ಮತ್ತು ಅಸಂಘಟಿತ ನೌಕರರು ಸಂಕಷ್ಟ ಅನುಭವಿಸುವಂತಾಗಿದೆ. ಆದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಲು ಹೊರಟಿದೆ ಎಂದು ದೂರಿದರು.