ತುಮಕೂರು:ಮನೆಯೊಂದರಲ್ಲಿ ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡ ಖದೀಮರು ಹಾಡಹಗಲೇ ಬೀಗ ಒಡೆದು ಕಳ್ಳತನಕ್ಕೆ ಯತ್ನಿಸಿ ಸಿಕ್ಕಿಬಿದ್ದಿರುವ ಘಟನೆ ಜಿಲ್ಲೆಯ ಶಿರಾ ನಗರದ ವಿದ್ಯಾನಗರದಲ್ಲಿ ಭಾನುವಾರ ನಡೆದಿದೆ. ಪೊಲೀಸ್ ಸಿಬ್ಬಂದಿಯೊಬ್ಬರ ಮನೆಗೆ ನುಗ್ಗಿ ಚಿನ್ನಾಭರಣ ದೋಚುವಾಗಲೇ ಖತರ್ನಾಕ್ ಕಳ್ಳರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಬಡವನಹಳ್ಳಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಮಹೇಶ್ ಅವರು ಕುಟುಂಬ ಸಮೇತ ಹೊರಗೆ ಹೋಗಿದ್ದರು. ಕಾರೊಂದರಲ್ಲಿ ಬಂದಿದ್ದ ನಾಲ್ವರು ಖದೀಮರು ಮನೆ ಬಾಗಿಲಿಗೆ ಬೀಗ ಹಾಕಿದ್ದನ್ನು ಗಮನಿಸಿದ್ದಾರೆ. ಕೂಡಲೇ ಅಲರ್ಟ್ ಆದ ಅವರು ಕೈಗೆ ಗ್ಲೌಸ್ ಹಾಕಿಕೊಂಡು ಮಾರಕಾಸ್ತ್ರಗಳನ್ನು ಹಿಡಿದು ಬಾಗಿಲ ಬೀಗ ಮುರಿದಿದ್ದಾರೆ. ಮನೆಯೊಳಗೆ ಇಬ್ಬರು ಹೋದರೆ, ಮತ್ತಿಬ್ಬರು ಕಾರಿನೊಳಗೆ ಕುಳಿತು ವಾಚ್ ಮಾಡುತ್ತಿದ್ದರು.
ಈ ವೇಳೆ ಚಾಲಾಕಿಗಳ ಚಲನವಲನ ಗಮನಿಸಿದ ಅಕ್ಕಪಕ್ಕದ ಮನೆಯವರು ಅನುಮಾನಗೊಂಡು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತಕ್ಷಣವೇ ಸ್ಥಳಕ್ಕಾಗಮಿಸಿದ್ದನ್ನು ಕಂಡು ಮನೆಯ ಹೊರಗೆ ಕಾರಿನಲ್ಲಿ ಕುಳಿತಿದ್ದ ಇಬ್ಬರು ಖದೀಮರು ಪರಾರಿ ಆಗಿದ್ದಾರೆ. ಇತ್ತ ಮನೆಯೊಳಗೆ ಇನ್ನಿಬ್ಬರು ಇರುವುದನ್ನು ಖಚಿತ ಪಡಿಸಿಕೊಂಡ ಪೊಲೀಸರು ಒಳಗೆ ನುಗ್ಗಿದ್ದಾರೆ.
ಚಿನ್ನಾಭರಣವನ್ನೆಲ್ಲ ಕದಿಯುತ್ತಿದ್ದ ಖದೀಮರನ್ನು ಹಿಡಿಯಲು ಪೊಲೀಸರು ಮುಂದಾಗಿದ್ದಾರೆ. ಈ ವೇಳೆ ಪೊಲೀಸರ ಮೇಲೆಯೇ ಡ್ರ್ಯಾಗರ್‌ನಿಂದ ಹಲ್ಲೆಗೆ ಯತ್ನಿಸಿದ್ದಾರೆ. ಶಿರಾ ನಗರ ಪೊಲೀಸ್ ಠಾಣೆಯ ಕ್ರೈಂ ಸಿಬ್ಬಂದಿ ಧರ್ಮೇಶ್ ಮತ್ತು ಖಲೀಲ್ ಮೇಲೆ ಕಳ್ಳರು ಹಲ್ಲೆಗೆ ಯತ್ನಿಸಿದ್ದಾರೆ. ಆದರೆ ಪೊಲೀಸರು ಇವರಿಬ್ಬರನ್ನು ಸೆರೆಹಿಡಿದಿದ್ದಾರೆ.