ತುಮಕೂರು:ತುಮಕೂರು ಜಿಲ್ಲೆ ಮಧುಗಿರಿ ತಾಲೂಕು ಕಂಸಾನಹಳ್ಳಿ ಪ್ರಾಥಮಿಕ ಶಾಲೆಯಲ್ಲಿದ್ದ ಇಬ್ಬರು ಶಿಕ್ಷಕರ ಪೈಕಿ ಶಿಕ್ಷಕರೊಬ್ಬರು 6 ತಿಂಗಳಿನಿಂದ ಕೆಲಸಕ್ಕೆ ಗೈರು ಹಾಜರಾಗಿರುವುದರಿಂದ ಮಕ್ಕಳಿಗೆ ಪಾಠ ಪ್ರವಚನಗಳು ಮರೀಚಿಕೆಯಾಗಿದೆ.
ಶಿಕ್ಷಕನ ಪರ್ಯಾಯ ವ್ಯವಸ್ಥೆಗೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ ಒಂದರಿಂದ ಐದನೇ ತರಗತಿವರೆಗೆ ಇರುವ ಈ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 38 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸಿ.ಎನ್ ನರಸಿಂಹ ರೆಡ್ಡಿ ಎಂಬ ಶಿಕ್ಷಕ ಶಾಲೆಗೆ ಸರಿಯಾಗಿ ಬಾರದೇ ಗೈರು ಹಾಜರಾಗುತ್ತಿದ್ದರು. ಇದರಿಂದ ಮಕ್ಕಳಿಗೆ ಪೂರಕವಾದ ಶಿಕ್ಷಣ ದೊರೆಯುತ್ತಿರಲಿಲ್ಲ. ಹೀಗಾಗಿ ಗ್ರಾಮಸ್ಥರೆಲ್ಲರೂ ಶಾಲೆಗೆ ಬಾರದಂತೆ ತಾಕೀತು ಮಾಡಿದರು. ಹೀಗಾಗಿ ಇಬ್ಬರು ಶಿಕ್ಷಕರ ಪೈಕಿ ಒಬ್ಬರು ಶಾಲೆಗೆ ಬಾರದೇ ಸುಮಾರು ಮೂರು ತಿಂಗಳು ಕಳೆದಿದೆ.
ಪ್ರಸ್ತುತ ಶಾಲೆಯಲ್ಲಿ ಜಿ.ಕೆ. ಹೊನ್ನೇಶಪ್ಪ ಎಂಬ ಮುಖ್ಯ ಶಿಕ್ಷಕರೊಬ್ಬರಿದ್ದು, ಅವರೇ ಎಲ್ಲವನ್ನೂ ನೋಡಿಕೊಳ್ಳಬೇಕಾಗಿದೆ. ಶಾಲೆಯ ಬಿಸಿಯೂಟ ಕಾರ್ಯಕ್ರಮ ಅನುಷ್ಠಾನ 38 ಮಕ್ಕಳಿಗೆ ನಿತ್ಯ ಬೋಧನೆ ಮಾಡುವುದರ ಜೊತೆಗೆ ಇಲಾಖೆಯ ಎಲ್ಲ ಕೆಲಸಗಳನ್ನು ನಿರ್ವಹಿಸಬೇಕಾಗಿದೆ. ಇದರಿಂದಾಗಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಸಂಪೂರ್ಣ ಕುಸಿದು ಹೋಗಿದೆ. ಮಧುಗಿರಿ ತಾಲೂಕಿನ ಕೊಂಡವಾಡಿ, ಕಂಸಾನಹಳ್ಳಿ, ಅಕ್ಕಲಾಪುರ, ಜೋಗೇನಹಳ್ಳಿ ವ್ಯಾಪ್ತಿಯ ಮಕ್ಕಳು ಈ ಪ್ರಾಥಮಿಕ ಶಾಲೆಯಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ, ಶಾಲೆಯಲ್ಲಿರುವ ಒಬ್ಬ ಶಿಕ್ಷಕರಿಂದ ಮಕ್ಕಳಿಗೆ ಪೂರಕವಾದ ಶಿಕ್ಷಣ ವ್ಯವಸ್ಥೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತಕ್ಷಣ ಹೆಚ್ಚುವರಿ ಶಿಕ್ಷಕರ ನೇಮಿಸಿ ಎಂದು ಆಗ್ರಹಿಸಿ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದ್ದಾರೆ.
ಕಂಸಾನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕೂಡ ಈ ರೀತಿಯ ಅವ್ಯವಸ್ಥೆಯಿಂದಾಗಿ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ದಶಕದ ಹಿಂದೆ ಈ ಶಾಲೆಯಲ್ಲಿ ಸುಮಾರು ನೂರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದರು ಆದರೆ, ಪ್ರಸ್ತುತ ಶಿಕ್ಷಕರ ಕೊರತೆಯಿಂದಾಗಿ 38 ಮಕ್ಕಳಿಗೆ ಇಳಿದು ಹೋಗಿದೆ. ತಕ್ಷಣ ಶಿಕ್ಷಣ ಇಲಾಖೆ ಅಧಿಕಾರಿಗಳು ಬೇರೆ ಶಿಕ್ಷಕರನ್ನು ನೇಮಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಬಂದಿದ್ದ ಬಿಆರ್‌ಸಿ ಆನಂದ್ ಅವರನ್ನು ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡರು.
ಗೈರು ಹಾಜರಾಗಿರುವ ಶಿಕ್ಷಕ ನರಸಿಂಹ ರೆಡ್ಡಿ ಕುರಿತು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಕೂಡ ಬರೆದಿದ್ದೇನೆ. ಹಲವು ದಿನಗಳಿಂದ ಶಾಲೆಗೆ ಬಂದಿಲ್ಲ ಹೀಗಾಗಿ ಶೈಕ್ಷಣಿಕ ವ್ಯವಸ್ಥೆಯ ಸಂಪೂರ್ಣ ಜವಾಬ್ದಾರಿ ನನ್ನ ಮೇಲೆ ಬಿದ್ದಿದೆ. ಸಮಸ್ಯೆಯನ್ನು ಬಗೆಹರಿಸುವಂತೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿರುವುದಾಗಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಜಿ ಕೆ ಹೊನ್ನೇಶಪ್ಪ ತಿಳಿಸಿದ್ದಾರೆ.