ತುಮಕೂರು:ಪಾವಗಡದಲ್ಲಿ ಶನಿವಾರ ಸಂಭವಿಸಿದ ಖಾಸಗಿ ಬಸ್ ದುರಂತದಲ್ಲಿ, ಸಹೋದರಿಯರಿಬ್ಬರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಇಂದು ಇಬ್ಬರ ಅಂತ್ಯಕ್ರಿಯೆಯನ್ನು ಅಕ್ಕಪಕ್ಕದಲ್ಲೇ ನೆರವೇರಿಸಲಾಯಿತು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಪೋತಗನಹಳ್ಳಿಯಿಂದ ಪಾವಗಡಕ್ಕೆ ತೆರಳುತ್ತಿದ್ದ ಬಸ್ನಲ್ಲಿ ಸಹೋದರಿಯರಾದ ಅಮೂಲ್ಯ ಮತ್ತು ಹರ್ಷಿತಾ ತೆರಳುತ್ತಿದ್ದರು. ಅಪಘಾತ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿಯೇ ಅಮೂಲ್ಯ ಮೃತಪಟ್ಟಿದ್ದಳು. ತೀವ್ರವಾಗಿ ಗಾಯಗೊಂಡಿದ್ದ ಹರ್ಷಿತಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಸಾವನ್ನಪ್ಪಿದ್ದಳು. ಇವರಿಬ್ಬರು ಹನುಮಂತರಾಯ ಮತ್ತು ಲಕ್ಷ್ಮಿನರಸಿಂಹ ದಂಪತಿಯ ಮಕ್ಕಳಾಗಿದ್ದಾರೆ.