ತುಮಕೂರು : ನಗರಗಳ ಬೆಳವಣಿಗೆಯಲ್ಲಿ ಕೊಳಗೇರಿ ನಿವಾಸಿಗಳ ಕೊಡುಗೆ ಅಪಾರವಾದದ್ದು, ದೇಶದ ಪ್ರತಿಯೊಂದು ನಗರಗಳ ಅಭಿವೃದ್ಧಿ ಕಾರ್ಯದಲ್ಲಿ ತೊಡಗುವ ಮೂಲಕ ಮಾನವ ಸಂಪನ್ಮೂಲದಲ್ಲಿ ಸ್ಲಂ ನಿವಾಸಿಗಳೇ ಹೆಚ್ಚು ಪಾತ್ರವಹಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್ ಅಭಿಪ್ರಾಯಪಟ್ಟರು.
ನಗರದ ಕನ್ನಡ ಭವನದಲ್ಲಿ ಸ್ಲಂ ನಿವಾಸಿಗಳ ಕೊಡುಗೆ ಮತ್ತು ನಗರದ ಮೇಲಿನ ಹಕ್ಕಿಗಾಗಿ ಜಿಲ್ಲಾ ಸಮಾವೇಶ ಮತ್ತು ಸ್ಲಂ ಹಬ್ಬ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಆರ್ಥಿಕ ವ್ಯವಸ್ಥೆಯಲ್ಲಿ ದೇಶ ಅಭಿವೃದ್ಧಿಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮಾನವ ಸಂಪನ್ಮೂಲದ ಕೊಡುಗೆ ಇದರಲ್ಲಿ ಅಪಾರ, ಸ್ಲಂ ನಿವಾಸಿಗಳ ಪಾತ್ರ ಹೆಚ್ಚಾಗಿದೆ.
ಕೆಲ ಖಾಸಗಿ ಕಂಪನಿಗಳಿಂದ ಬಡವರಿಗೆ ಸೌಲಭ್ಯ ವಿತರಣೆಯ ಬಗ್ಗೆ ಚರ್ಚೆ ಮಾಡುವ ಸಂದರ್ಭದಲ್ಲಿ ಈ ಮಾಹಿತಿ ತಿಳಿಯಿತು. ಅದಕ್ಕೆ ಪೂರಕವಾಗಿ ಮೋದಿಯವರು ಹೇಳಿದಂತೆ 2022 ಕ್ಕೆ ಸ್ಲಂ ರಹಿತ ದೇಶ ಕಟ್ಟುವ ಯೋಜನೆ ರೂಪಿಸಿದ್ದಾರೆ, ಈ ನಿಟ್ಟಿನಲ್ಲಿ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಪ್ರತಿಯೊಬ್ಬರೂ ಸದ್ಬಳಕೆ ಮಾಡಿಕೊಳ್ಳಬೇಕು. ಜೊತೆಗೆ ಮುಖ್ಯಮಂತ್ರಿಗಳು ಸಹ ಬಹುಮಹಡಿ ಕಟ್ಟಡ ಯೋಜನೆ, ಅಂಬೇಡ್ಕರ್ ಆವಾಸ್ ಯೋಜನೆ ಮುಂತಾದ ಯೋಜನೆಗಳನ್ನು ಜಾರಿಗೆ ತರಲಿದ್ದಾರೆ ಎಂದರು.
ನಂತರ ಮಾತನಾಡಿದ ಶಾಸಕ ಜ್ಯೋತಿ ಗಣೇಶ್, ನಗರ ಅಭಿವೃದ್ಧಿಗೆ ಮಾನವ ಸಂಪನ್ಮೂಲದ ಕೊಡುಗೆ ಅಪಾರ. ಬಡಜನರಿಗಾಗಿ ಕೇಂದ್ರ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ಮಾಡಿದೆ, ಪ್ರಧಾನ ಮಂತ್ರಿ ಸ್ಕಿಲ್ ಡೆವೆಲಪ್ಮೆಂಟ್ ಅಡಿಯಲ್ಲಿ ವಿವಿಧ ತರಬೇತಿಗಳನ್ನು ಪಡೆದುಕೊಂಡು ಸ್ವಯಂ ಉದ್ಯೋಗ ಮಾಡಿಕೊಳ್ಳುವಲ್ಲಿ ಪ್ರತಿಯೊಬ್ಬರು ಮುಂದಾಗಬೇಕು ಎಂದು ಸಲಹೆ ನೀಡಿದರು.
ದಿಬ್ಬೂರಿನಲ್ಲಿರುವ ಮನೆಗಳನ್ನು ಕೆಲ ಜನರು ಬಾಡಿಗೆ ಕೊಟ್ಟುಕೊಂಡು, ಆ ಮನೆಗಳಿಂದ ಹಣ ಸಂಪಾದನೆ ಮಾಡುತ್ತಿದ್ದಾರೆ. ಈ ಮನೆಗಳು ಕೇವಲ ಬಡವರಿಗೆ ಎಂದು ನಿರ್ಮಾಣ ಮಾಡಲಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲಿ ಎಂದರು.