ತುಮಕೂರು:ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ತೆಂಗಿನಕಾಯಿ ಬೆಳೆಗಾರರ ಸಂಕಷ್ಟ ಮುಂದುವರಿದಿದೆ.ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಗಣನೀಯ ಪ್ರಮಾಣದಲ್ಲಿ ಕುಸಿದಿದ್ದು ಇದರಿಂದ ನಲುಗಿ ಹೋಗಿರುವ ಬೆಳೆಗಾರರಿಗೆ ಇದೀಗ ಬೆಂಬಲ ಬೆಲೆ ಖರೀದಿ ಮಾಡುತ್ತಿರುವ ಸಂದರ್ಭದಲ್ಲಿಯೂ ಗುಣಮಟ್ಟ ಪರೀಕ್ಷೆ ನಡೆಸಿ ಕೊಬ್ಬರಿ ದಾಸ್ತಾನನ್ನು ತಿರಸ್ಕಾರ ಮಾಡುತ್ತಿರುವುದು ಬೆಳೆಗಾರರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಜಿಲ್ಲೆಯ ತಿಪಟೂರು ಹಾಗೂ ತುರುವೇಕೆರೆ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನಫೇಡ್ನಲ್ಲಿ ಕೊಬ್ಬರಿ ಖರೀದಿ ವೇಳೆ ಗುಣಮಟ್ಟದಿಂದ ಕೂಡಿಲ್ಲ ಎಂದು ಸಾಕಷ್ಟು ಕೊಬ್ಬರಿಯನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಇದರಿಂದ ಕಂಗಾಲಾಗಿರುವ ಬೆಳೆಗಾರರು ಮಾರುಕಟ್ಟೆಯಲ್ಲಿ ಹೊರಗಡೆ ಕನಿಷ್ಠ ಬೆಲೆಗೆ ಮಾರಾಟ ಮಾಡುತ್ತಿರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ನ್ಯಾಫೆಡ್ ಖರೀದಿಸುತ್ತಿರುವ ಅದರ ಮಾನದಂಡ ಪ್ರಕಾರ ಕೊಬ್ಬರಿಯು ಸ್ಪಷ್ಟವಾದ ಗಾತ್ರದಲ್ಲಿರಬೇಕು ಹೀಗಿದ್ದರೆ ಮಾತ್ರ ಅದನ್ನು ಖರೀದಿಸಲಾಗುವುದು. ಅಲ್ಲದೆ ಉಷ್ಣಾಂಶ (ಮಾಯಿಶ್ಚರೈಸರ್) ಇರುವಂತಹ ಕೊಬ್ಬರಿಯನ್ನು ಖರೀದಿಸಲು ನೆಫೆಡ್ ಹಿಂದೇಟು ಹಾಕುತ್ತಿದೆ. ಇದು ಕೊಬ್ಬರಿ ಬೆಳೆಗಾರರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಕೆಡಿಪಿ ಸಭೆಯಲ್ಲಿ ಪ್ರಾತ್ಯಕ್ಷಿತೆ ನೀಡಿರುವ ಕೊಬ್ಬರಿ ಖರೀದಿಯಲ್ಲಿ ಅನ್ಯಾಯ ಆಗುತ್ತಿದೆ ಎಂದು ಆರೋಪಿಸಿದ ಶಾಸಕ ಎಂ ಟಿ ಕೃಷ್ಣಪ್ಪ, ನಫೇಡ್ನಲ್ಲಿ ಕೊಬ್ಬರಿ ಖರೀದಿ ವೇಳೆ ಗುಣಮಟ್ಟದಲ್ಲ ಎಂದು ತಿರಸ್ಕಾರ ಮಾಡುತ್ತಿದ್ದು, ಅವೈಜ್ಞಾನಿಕವಾಗಿ ಅಧಿಕಾರಿಗಳು ಕೊಬ್ಬರಿ ಗುಣಮಟ್ಟ ಅಳೆಯುತ್ತಿದ್ದಾರೆ ಎಂದು ದೂರಿದರು.