ತುಮಕೂರು:ಜಿಲ್ಲಾ ಉಸ್ತುವಾರಿ ಸಚಿವರನ್ನು ಮದಲೂರು ಕೆರೆಗೆ ನೀರು ಹರಿಸುವಂತೆ ಕೇಳಿಕೊಂಡಾಗ ಉಡಾಫೆಯ ಉತ್ತರಗಳನ್ನು ಹೇಳುವ ಮೂಲಕ ರೈತರನ್ನು ಹಾಗೂ ನೀರಾವರಿ ಹೋರಾಟಗಾರರನ್ನು ಅವಮಾನಿಸಿದ್ದಾರೆ, ಜಿಲ್ಲಾ ಉಸ್ತುವಾರಿ ಸಚಿವರು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಎಂದು ಶಿರಾ ತಾಲೂಕು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ರಮೇಶ್ ಒತ್ತಾಯಿಸಿದ್ದಾರೆ.
ಶಿರಾ ತಾಲೂಕಿನ ಮದಲೂರು ಕೆರೆಗೆ ನೀರು ಹರಿಸುವಂತೆ ಒತ್ತಾಯಿಸಿ ರೈತ ಮುಖಂಡರು ಶಿರಾದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೈಕ್ರ‍್ಯಾಲಿನಡೆಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಶಿರಾ ತಾಲೂಕು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ರಮೇಶ್, ಶಿರಾ ತಾಲೂಕಿಗೆ ಹಂಚಿಕೆಯಾಗಿರುವ ಹೇಮಾವತಿ ನೀರನ್ನು ಹರಿಸಲು ಸ್ಥಳೀಯ ಸಂಸದರಾದ ಎಂ.ಪಿ ಬಸವರಾಜು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ ಮಾಧುಸ್ವಾಮಿ ಇಲ್ಲಸಲ್ಲದ ನೆಪ ಹೇಳುವ ಮೂಲಕ ಶಿರಾಗೆ ನೀರು ಹರಿಸುವುದಕ್ಕೆ ತಡೆ ಹಾಕಿದ್ದಾರೆ. ಅಷ್ಟೇ ಅಲ್ಲ ರೈತರನ್ನು ಬೇಕಾಬಿಟ್ಟಿಯಾಗಿ ಮಾತನಾಡಿಸುವ ಮೂಲಕ ನೀರಾವರಿ ಹೋರಾಟಗಾರರನ್ನು ಅವಮಾನ ಮಾಡಿದ್ದಾರೆ ಎಂದು ಮಾದುಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶಿರಾ ತಾಲೂಕು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ರಮೇಶ್ ಶಿರಾಗೆ ಹೇಮಾವತಿ ನೀರು ಹರಿಸುವಂತೆ ಒತ್ತಾಯಿಸಿದರೆ, ಉಡಾಫೆಯ ಉತ್ತರ ನೀಡುತ್ತಾರೆ. ನೀರು ಹರಿಯದಂತೆ ಚಾನೆಲ್ಗೆ ಮರಳು ಮೂಟೆ ಹಾಕಿದ್ದಾರೆ. ಮದಲೂರು ಕೆರೆಗೆ ನೀರು ಹಂಚಿಕೆಯಾಗಿಲ್ಲ ಎನ್ನುವ ಉಸ್ತುವಾರಿ ಸಚಿವರಿಗೆ ಮಾಹಿತಿ ಇಲ್ಲವೆ? ನೀರು ಹಂಚಿಕೆ ಆಗದೆ ಕೇಂದ್ರ ಸರ್ಕಾರ ಅನುದಾನ ನೀಡಿದೆಯೇ? ಎಂದು ಪ್ರಶ್ನಿಸಿದರು. ಶಿರಾಗೆ ಹಂಚಿಕೆಯಾಗಿರುವ 0.9 ಟಿಎಂಸಿ ನೀರು ಹರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಹಾಗೂ ರೈತರಿಗೆ ಅವಮಾನ ಮಾಡಿರುವ ರೀತಿಯಲ್ಲಿ ವರ್ತಿಸಿರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವರು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.