ತುಮಕೂರು: ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಸಾಕಷ್ಟು ಕೆರೆಕಟ್ಟೆಗಳನ್ನು ಕಾಣಬಹುದು. ಆದರೆ, ಕೆಲವು ಕೆರೆಗಳು ಒತ್ತುವರಿದಾರರ ಪಾಶಕ್ಕೆ ಸಿಲುಕಿ ನಲುಗುತ್ತಿದ್ದರೆ, ಇನ್ನು ಕೆಲವು ನಿರ್ವಹಣೆ ಇಲ್ಲದೆ ನಿರ್ಲಕ್ಷ್ಯದಿಂದಾಗಿ ಕಲುಷಿತಗೊಂಡು ನೇಪಥ್ಯಕ್ಕೆ ಸರಿಯುತ್ತಿವೆ.
ಕಲ್ಪತರು ನಾಡು ತುಮಕೂರಿನ ಕೆರೆಗಳು ತ್ಯಾಜ್ಯ ಮುಕ್ತಿಯಾಗಬೇಕಿದೆ... ತುಮಕೂರು ಜಿಲ್ಲೆಯಲ್ಲಿ ಕೆರೆಗಳಿಗೆ ನೀರು ಹರಿದು ಬರುವಂತಹ ರಾಜಕಾಲುವೆಗಳು ಒತ್ತುವರಿದಾರರ ಕೆಂಗಣ್ಣಿಗೆ ಗುರಿಯಾಗಿದ್ದು, ಚೆನ್ನಾಗಿ ಮಳೆ ಬಂದರೂ ಕೆರೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿಲ್ಲ. ಹೀಗಾಗಿ ಇವೆಲ್ಲವೂ ಕಸ ತುಂಬುವ ಬೃಹತ್ ಹೊಂಡಗಳಾಗಿ ಪರಿವರ್ತನೆಗೊಳ್ಳುತ್ತಿವೆ.
ಮಳೆ ನೀರು ಇಲ್ಲದೆ ಪಾಳುಬಿದ್ದ ಕೆರೆಗಳಿಗೆ ಅನುಪಯುಕ್ತ ಕಟ್ಟಡ ಸಾಮಗ್ರಿಗಳನ್ನು ತಂದು ಹಾಕಲಾಗುತ್ತಿದೆ. ಅಲ್ಲದೆ ಮಾಂಸ ಮಾರಾಟ ಕೇಂದ್ರಗಳಲ್ಲಿ ಉಳಿದ ಕಸವನ್ನು ತಂದು ಕೆರೆಗಳಿಗೆ ಸುರಿಯಲಾಗುತ್ತಿದೆ. ರಾತ್ರೋರಾತ್ರಿ ಕೆಲವರು ಅಪಾರ ಪ್ರಮಾಣದ ಕಸವನ್ನು ತಂದು ಕೆರೆಗಳಿಗೆ ಸುರಿದು ಹೋಗುತ್ತಿದ್ದಾರೆ. ಇದರಿಂದಾಗಿ ಕೆರೆ ಬಹುತೇಕ ಅನುಪಯುಕ್ತ ವಸ್ತುಗಳ ಹೊಂಡಗಳಾಗಿ ಕಾಣುತ್ತಿವೆ. ಇನ್ನೂ ಮಳೆ ಬಂದ ಸಂದರ್ಭದಲ್ಲಿ ಕಸದೊಂದಿಗೆ ನೀರು ಸಂಗ್ರಹವಾಗಿ ಗಬ್ಬು ನಾರುತ್ತಿದೆ. ಇದರಿಂದ ಕೆರೆ ಸುತ್ತಮುತ್ತಲ ವಾತಾವರಣ ಸಂಪೂರ್ಣ ಕಲುಷಿತಗೊಳ್ಳುತ್ತಿದೆ.
ಇನ್ನು ತುಮಕೂರು ಜಿಲ್ಲೆಯ ಕೆಲವು ಕೈಗಾರಿಕೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಅನುಮತಿ ಇಲ್ಲದೆ ಯಾವುದೇ ಕೆರೆಗಳಿಗೂ ಹಾಗೂ ಹೊಳೆಗಳಿಗೆ ಸುರಿಯುವಂತಿಲ್ಲ. ಅಂತಹ ಯಾವುದೇ ರೀತಿಯ ದೂರುಗಳು ಬಂದರೆ ತಕ್ಷಣ ಕೆರೆಗಳ ಬಳಿ ತೆರಳಿ ಮಾದರಿ ಸಂಗ್ರಹಿಸಿ ಪರೀಕ್ಷಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ಅಧಿಕಾರಿ ನಾಗರಾಜ್ ಹೇಳಿದರು.
ಇನ್ನೂ ಇದುವರೆಗೂ ಯಾವುದೇ ರೀತಿಯ ಅಂತಹ ದೂರುಗಳು ಬಂದಿಲ್ಲ. ಅನೇಕ ಕೈಗಾರಿಕೆಗಳು ತ್ಯಾಜ್ಯವನ್ನು ಹೊಳೆಗಳಿಗೆ ಸುರಿಯಲು ಅನುಮತಿ ಪಡೆದಿರುತ್ತಾರೆ. ಆದರೆ, ಅಂತಹ ಯಾವುದೇ ನದಿಗಳು ತುಮಕೂರು ಜಿಲ್ಲೆಯಲ್ಲಿ ಇಲ್ಲದೆ ಇರುವುದರಿಂದ ಯಾವ ಕೈಗಾರಿಕೆಗೆ ಅನುಮತಿ ನೀಡಿರುವುದಿಲ್ಲ ಎಂದು ತಿಳಿಸಿದರು.
ತುಮಕೂರು ಜಿಲ್ಲೆಯಲ್ಲಿ ಒಂದೆಡೆ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ಅಧಿಕಾರಿಗಳು ಕೆರೆಗಳಿಗೆ ತ್ಯಾಜ್ಯವನ್ನು ಸುರಿಯುತ್ತಿರುವ ದೂರುಗಳು ಬಂದಿಲ್ಲ ಎನ್ನುತ್ತಿದ್ದರೆ, ಇನ್ನೊಂದೆಡೆ ಕೆಲವು ಕೆರೆಗಳಲ್ಲಿ ಕಣ್ಣಿಗೆ ಕಾಣ ಸಿಗುವ ಅಪಾರ ಪ್ರಮಾಣದ ತ್ಯಾಜ್ಯ ಗೊಂದಲಕ್ಕೆ ಸಿಲುಕಿಸುವುದಂತು ನಿಜ. ಇನ್ನು ಮುಂದಾದರೂ ಸಂಬಂಧಪಟ್ಟವರು ಇತ್ತ ಗಮನಹರಿಸಿ ಕೆರೆಗಳನ್ನು ಸಂರಕ್ಷಿಸುವೆಡೆಗೆ ಕ್ರಮ ಕೈಗೊಳ್ಳಬೇಕಾಗಿದೆ.