ಕರ್ನಾಟಕ

karnataka

ETV Bharat / state

Belli-Bomman: ಆನೆಗಳನ್ನು ಮಕ್ಕಳಂತೆ ಸಾಕಿ ಆಸ್ಕರ್‌ ಪಡೆದ ಬೆಳ್ಳಿ- ಬೊಮ್ಮನ್ ದಂಪತಿಗಿಲ್ಲ ತಲೆ ಮೇಲೊಂದು ಸೂರು! - Belli Bomman couple

ತಮಗೊಂದು ಮನೆ ಕಟ್ಟಲು ಸಹಾಯ ಮಾಡುವಂತೆ ಕನ್ನಡಿಗರಲ್ಲಿ ಮನವಿ ಮಾಡಿಕೊಂಡ ಬೆಳ್ಳಿ ಬೊಮ್ಮನ್​ ದಂಪತಿ.

Belli Bomman couple honoured
ಬೆಳ್ಳಿ ಬೊಮ್ಮನ್ ದಂಪತಿಗೆ ಸನ್ಮಾನ

By

Published : Jun 16, 2023, 8:35 PM IST

Updated : Jun 16, 2023, 11:00 PM IST

ತಮಗೆ ಮನೆ ಕಟ್ಟಲು ಸಹಾಯ ಮಾಡುವಂತೆ ಕನ್ನಡಿಗರಲ್ಲಿ ಮನವಿ ಮಾಡಿಕೊಂಡ ಬೆಳ್ಳಿ ಬೊಮ್ಮನ್​ ದಂಪತಿ

ತುಮಕೂರು: ಆ ಒಂದು ಜೋಡಿಯ ಮಾನವೀಯತೆಯ ಮನಸ್ಸಿಗೆ ಇಡೀ ವಿಶ್ವವೇ ತಲೆಬಾಗಿತ್ತು. ತಮ್ಮ ಕಾರ್ಯದಿಂದಾಗಿ ಇಡೀ ವಿಶ್ವದ ಶಹಬ್ಬಾಸ್‌ಗಿರಿ ಪಡೆದಿದ್ದರು. ಲಕ್ಷಾಂತರ ಅಭಿಮಾನಿಗಳಿಂದ ಅವರಿಗೆ ಅಭಿನಂದನೆಯ ಮಹಾಪೂರವೇ ಹರಿದುಬಂದಿತ್ತು. ಸಾಧನೆಯ ಶಿಖರವೇರಿದ್ದ ಆ ಜೋಡಿಯ ವ್ಯಥೆಯನ್ನು ಈಗ ಕೇಳೋರಿಲ್ಲದಂತಾಗಿದೆ. ದಿ ಎಲಿಫೆಂಟ್ ವಿಸ್ಪರರ್ಸ್​ ಖ್ಯಾತಿಯ ಆಸ್ಕರ್ ಪ್ರಶಸ್ತಿ ಪುರಸ್ಕೃತ ಬೆಳ್ಳಿ, ಬೊಮ್ಮನ್ ಜೋಡಿ ಇದೀಗ ಸೂರಿಗಾಗಿ ಪರದಾಡುವಂತಾಗಿದೆ.

ಬೆಳ್ಳಿ, ಬೊಮ್ಮನ್ ಇಬ್ಬರ ಹೆಸರು ಕೇಳಿದಾಕ್ಷಣ ನೆನಪಾಗೋದೇ ಮುದ್ದಾದ ಆ ಪುಟಾಣಿ ಆನೆ. ಅದರ ಆರೈಕೆ ಹಾಗು ಹಿಂದಿನ ಮಾನವೀಯ ಕೈಗಳು. ಇತ್ತೀಚೆಗೆ ದಿ ಎಲಿಫೆಂಟ್ ವಿಸ್ಪರರ್ಸ್ ಎನ್ನುವ ಕಿರುಚಿತ್ರ ಇಡೀ ವಿಶ್ವದ ಗಮನ ಸೆಳೆದಿತ್ತು. ಅತ್ಯುನ್ನತ ಆಸ್ಕರ್ ಪ್ರಶಸ್ತಿಯ ಗರಿ ಈ ಕಿರುಚಿತ್ರದ ಮುಡಿಗೇರಿತ್ತು. ಅಂದು ಇಡೀ ಭಾರತ ದೇಶವೇ ಬೆಳ್ಳಿ ಬೊಮ್ಮನ್ ದಂಪತಿಯನ್ನು ಕೊಂಡಾಡಿತ್ತು. ತಮಿಳುನಾಡಿನ ಮುದುಮಲೈ ಕಾಡಿನ ಬುಡಕಟ್ಟು ಜನಾಂಗಕ್ಕೆ ಸೇರಿದ ಇಬ್ಬರನ್ನೂ ದೇಶದ ಪ್ರಧಾನಿ ಮೋದಿ ಅವರೇ ಖುದ್ದಾಗಿ ಭೇಟಿ ನೀಡಿ ಇವರ ಕಾರ್ಯ ಮೆಚ್ಚಿ, ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಇಂದು ಇವರ ಕಷ್ಟ ಆಲಿಸೋರು ಯಾರೂ ಇಲ್ಲದಂತಾಗಿದೆ. ಸೂರಿಲ್ಲದ ನಮಗೆ ಸೂರಿಗಾಗಿ ಸಹಾಯ ಮಾಡಿ ಅಂತಾ ಖುದ್ದು ಬೆಳ್ಳಿ- ಬೊಮ್ಮನ್​ ದಂಪತಿ ಅಂಗಲಾಚುತ್ತಿದ್ದಾರೆ.

ಇವರ ಮಹಾನ್ ಸಾಧನೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಬೇಕೆಂದು ತುಮಕೂರು ಜಿಲ್ಲೆಯ ಶಿರಾದ ವರ್ಧಮಾನ್ ಶಾಲೆಯ ಆಡಳಿತ ಮಂಡಳಿ ಆಹ್ವಾನಿಸಿದ್ದರು. ಶಾಲೆಯಲ್ಲಿ ನಡೆದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಸಾಧನೆಯನ್ನು ಮಕ್ಕಳಿಗೆ ತಿಳಿಸಿ, ಅವರೊಟ್ಟಿಗೆ ಸಂವಾದ ಮಾಡುವ ವಿನೂತನ ಕಾರ್ಯಕ್ರಮ ನೆರವೇರಿತು. ಈ ವೇಳೆ ಬೊಮ್ಮನ್ ಅವರು ತಮ್ಮ ಕಷ್ಟವನ್ನು ಪರಿಪರಿಯಾಗಿ ಹೇಳಿಕೊಂಡಿದ್ದಾರೆ.‌ ಮನೆಯಿಲ್ಲದೇ ಪರಿತಪಿಸುತ್ತಿರುವ ನಮಗೆ ಮನೆ ನಿರ್ಮಿಸಿಕೊಡಲು ಸಹಾಯ ಮಾಡಿ ಎಂದು ಎಲ್ಲರಲ್ಲೂ ಮನವಿ ಮಾಡಿಕೊಂಡರು.

ದಿ ಎಲಿಫೆಂಟ್ ವಿಸ್ಪರರ್ಸ್ ಕಿರುಚಿತ್ರ ಆಸ್ಕರ್ ಪ್ರಶಸ್ತಿ ಪಡೆಯುತ್ತಿದ್ದಂತೆ ಇವರಿಗೆ ಒಂದು ಲಕ್ಷ ಬಹುಮಾನ ನೀಡುವ ಮೂಲಕ ತಮಿಳುನಾಡಿನ ಸ್ಟಾಲಿನ್ ಸರ್ಕಾರ ಕೈತೊಳೆದುಕೊಂಡಿತು. ಪ್ರಧಾನಿ ಮೋದಿ ಅವರ ಭೇಟಿ ವೇಳೆಯೂ ಇವರಿಗೆ ಸಾಕಷ್ಟು ಭರವಸೆ ದೊರೆತಿದೆ. ಆದರೆ ಅದ್ಯಾವುದೂ ಈಡೇರದಿರುವುದು ವಿಪರ್ಯಾಸ. ಶಿರಾದ ಜನರು ಇವರ ಮನವಿಗೆ ಕರಗಿ ಇಂದು ಸಾಕಷ್ಟು ಸಹಾಯ ಮಾಡಿದ್ದಾರೆ. ವರ್ಧಮಾನ್ ಶಾಲೆಯ ಮುಖ್ಯಸ್ಥ ಸಂಜಯ್ ಅವರು ಒಂದು ವಾರದಲ್ಲಿ ಖುದ್ದಾಗಿ ಮುದುಮಲೈಗೆ ತೆರಳಿ ಇವರ ಸೂರಿಗೆ ಬೇಕಾದ ಸಹಾಯ ಮಾಡುವುದಾಗಿ ಬೆಳ್ಳಿ-ಬೊಮ್ಮನ್ ದಂಪತಿಗೆ ಭರವಸೆ ನೀಡಿದ್ದಾರೆ.

ತಮಿಳುನಾಡಿನವರಾದರೂ ಅವರ ನೋವಿಗೆ ಕರಗಿದ ಶಿರಾದ ಜನರು ಸಾಕಷ್ಟು ರೀತಿಯಲ್ಲಿ ಸಹಾಯ ಹಸ್ತ ಚಾಚಲು ಮುಂದಾಗಿರೋದು ಖುಷಿ ಸಂಗತಿ. ಮುದ್ದಾದ ರಘು ಎನ್ನುವ ಆನೆಯನ್ನು ರಕ್ಷಿಸುವ ಮೂಲಕ ಮಾನವೀಯ ಮೌಲ್ಯದ ಅರ್ಥಕ್ಕೆ ಜೀವ ಕೊಟ್ಟ ಈ ಜೋಡಿ ಅಂದು ಇಡೀ ವಿಶ್ವದ ಗಮನಸೆಳೆದು, ಇಂದು ಸಹಾಯಕ್ಕಾಗಿ ಪರಿತಪಿಸುತ್ತಿರುವುದು ನಿಜಕ್ಕೂ ವಿಪರ್ಯಾಸವಲ್ಲವೇ?.

ಇದನ್ನೂ ಓದಿ:ದಿ ಎಲಿಫೆಂಟ್ ವಿಸ್ಪರರ್ಸ್​ನ ಆಸ್ಕರ್​ ವಿಜೇತ ದಂಪತಿ ಬೊಮ್ಮನ್ ಬೆಳ್ಳಿ ಗೌರವಿಸಿದ ಸಿಎಸ್​​ಕೆ

Last Updated : Jun 16, 2023, 11:00 PM IST

ABOUT THE AUTHOR

...view details