ತುಮಕೂರು: ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ಸರ್ಕಾರ ತೆಗೆದುಕೊಂಡ ನಿರ್ಣಯ ಆಶ್ಚರ್ಯ ಉಂಟುಮಾಡಿಲ್ಲ. ವಿಚಾರ ತಿಳಿದುಕೊಳ್ಳದೇ, ತಾವು ಮುಖ್ಯಮಂತ್ರಿಯಾದ ತಕ್ಷಣವೇ ಸಿದ್ದರಾಮಯ್ಯ ಈ ನಿರ್ಣಯವನ್ನು ಅನೌನ್ಸ್ ಮಾಡಿದ್ದಾರೆ ಎಂದು ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ತಿಪಟೂರಿನಲ್ಲಿ ಇಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸರ್ಕಾರ ಘೋಷಣೆ ಮಾಡಿರುವ ಎಲ್ಲ ನಿರ್ಣಯಗಳನ್ನು ಗಮನಿಸಿದಾಗ, ಅವರ ಕಣ್ಣು ಇವತ್ತು ಪಾರ್ಲಿಮೆಂಟ್ ಎಲೆಕ್ಷನ್ ಮೇಲಿದೆ ಅನ್ನೋದು ಗೊತ್ತಾಗುತ್ತದೆ. ಸಿದ್ದರಾಮಯ್ಯ ಆ್ಯಂಡ್ ಗ್ಯಾಂಗ್ ಎಲ್ಲರದ್ದೂ ದೇಶದಲ್ಲಿ ಮೋದಿ ಅವರನ್ನು ಅಧಿಕಾರದಿಂದ ಇಳಿಸಬೇಕು ಎಂಬುದು ಒಂದೇ ಉದ್ದೇಶ. ಅದು ಬಿಟ್ಟರೆ ಏನೂ ಇಲ್ಲ. ಮೋದಿ ಅವರನ್ನು ಯಾಕೆ ಅಧಿಕಾರದಿಂದ ಇಳಿಸಬೇಕು ಎನ್ನುವುದರ ಬಗ್ಗೆ ಒಂದು ಮಾತನ್ನೂ ಯಾರು ಆಡಲಿಲ್ಲ ಎಂದರು.
ಮುಂಬರುವ ಚುನಾವಣೆಗೆ ಮತ್ತೆ ಒಂದು ಸಮುದಾಯ ವೋಟ್ ವಿಭಜನೆ ಆಗಬಾರದು ಅನ್ನೋ ಕಾರಣಕ್ಕೆ, ಮತ್ತೆ ಒಟ್ಟುಗೂಡಿಸುವ ಕೆಲಸಕ್ಕೆ ಮುಂದಾಗ್ತಿದ್ದಾರೆ. ಅದಕ್ಕಾಗಿಯೇ ಬಿಜೆಪಿಯವರು ಶಿಕ್ಷಣದಲ್ಲಿ ಕೇಸರೀಕರಣ ಮಾಡಿದ್ದಾರೆ ಎಂದು ಹೇಳ್ತಿದ್ದಾರೆ. ಅದು ಯಾವುದು ಎಂದು ಹೇಳೋಕೆ ಅವರು ತಯಾರಿಲ್ಲ. ಯಾವ ಪಾಠ ಕೇಸರೀಕರಣ ಆಗಿದೆ ಅಂತ ಹೇಳೋಕೆ ಅವರಿಗೆ ಗೊತ್ತಿಲ್ಲ.
ಇದು ದ್ವೇಷದ ರಾಜಕಾರಣ. ವೋಟ್ ಬ್ಯಾಂಕ್ ಪಾಲಿಟಿಕ್ಸ್ ಮಾಡುವ ಸರ್ಕಾರ. ಕಾಂಗ್ರೆಸ್ ಸರ್ಕಾರ ಬರೀ ಶಿಕ್ಷಣಕ್ಕೆ ಮಾತ್ರ ಕೈ ಹಾಕಿಲ್ಲ. ನಾಲ್ಕಕ್ಕೆ ಕೈ ಹಾಕಿದ್ದಾರೆ. ಆ ನಾಲ್ಕಕ್ಕೂ ಕೈ ಹಾಕಿರುವ ಉದ್ದೇಶ ಒಂದು ಸಮುದಾಯದ ವೋಟ್ ಬ್ಯಾಂಕ್ ಅಷ್ಟೇ. ಹಿಜಾಬ್, ಹಲಾಲ್, ಜಟ್ಕಾ, ಕೇಸರೀಕರಣ. ಹಿಜಾಬ್ ವಿರುದ್ಧ ಹೈಕೋರ್ಟ್ನಲ್ಲಿ ತೀರ್ಪು ಬಂದರೂ ಕೂಡಾ, ನಾವು ಅದನ್ನು ತೆಗೆಯುತ್ತೇವೆ ಅಂತ ಹೊರಟಿದ್ದಾರೆ. ಇವರ ವರ್ತನೆ ಬಗ್ಗೆ ನನಗೆ ಸಾಕಷ್ಟು ಅನುಮಾನಗಳಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಅನೇಕ ಸಮಸ್ಯೆಗಳಿವೆ. ಮುಂಗಾರು ಮಳೆ ಇನ್ನೂ ಬಂದಿಲ್ಲ. ರೈತರ ಕಷ್ಟವನ್ನು ಕೇಳೋರಿಲ್ಲದಂತಾಗಿದೆ. ರೈತ ಎಲ್ಲವನ್ನೂ ಕಳೆದುಕೊಂಡಿದ್ದಾನೆ. ಅವರ ಬಗ್ಗೆ ಇವರಿಗೆ ಕಾಳಜಿ ಇಲ್ಲ. ಇನ್ನು ಕೊರೊನಾ ಕಾಲದಲ್ಲಿ ಶಿಕ್ಷಣದಲ್ಲಿ ಮಕ್ಕಳಿಗೆ ಆಗಿರುವಂತಹ ವ್ಯತ್ಯಾಸ, ಮಕ್ಕಳು ಪಾಠವನ್ನು ಕೇಳದೇ ಮುಂದೆ ಬಂದಿದ್ದಾರೆ. ಮೂರು ವರ್ಷ ಕಲಿಯಲಿ ಎಂದು ಅವರಿಗೆ ನಾವು ಕಲಿಕಾ ಚೇತರಿಕೆ ಮಾಡಿದೆವು. ಅದರ ಬಗ್ಗೆಯೂ ಇವರಿಗೆ ಯೋಚನೆ ಇಲ್ಲ ಎಂದು ಟೀಕಿಸಿದರು.