ತುಮಕೂರು: ಜಿಲ್ಲೆಗೆ ಹೇಮಾವತಿ ಜಲಾಶಯದಿಂದ ನಿಗದಿಯಾಗಿರುವ 25 ಟಿಎಂಸಿ ನೀರಲ್ಲಿ ಇನ್ನೂ 5 ಟಿಎಂಸಿ ನೀರು ಬಿಡುಗಡೆಯಾಗದೆ ಉಳಿದಿದೆ. ಇದಕ್ಕೆ ಹಾಸನ ಜಿಲ್ಲೆಯವರು ಕಡಿವಾಣ ಹಾಕುತ್ತಿದ್ದಾರೆ. ಇದನ್ನು ನಿಭಾಯಿಸುವ ನಿಟ್ಟಿನಲ್ಲಿ ಜಿಲ್ಲೆಯ ರಾಜಕಾರಣಿಗಳು ಮುಂದಾಗಿಲ್ಲ ಎಂದು ಮಾಜಿ ಸಚಿವ ಟಿ.ಬಿ ಜಯಚಂದ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತುಮಕೂರಿಗೆ ಹೇಮಾವತಿ ನದಿ ನೀರು ತರುವಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ವಿಫಲ: ಟಿ.ಬಿ ಜಯಚಂದ್ರ - ಮಾಜಿ ಸಚಿವ ಟಿ.ಬಿ ಜಯಚಂದ್ರ ಸುದ್ದಿ
ಹೇಮಾವತಿ ಜಲಾಶಯದಿಂದ ತುಮಕೂರು ಜಿಲ್ಲೆಗೆ 25 ಟಿಎಂಸಿ ನೀರಲ್ಲಿ ಇನ್ನೂ 5 ಟಿಎಂಸಿ ನೀರು ಬಿಡುಗಡೆಯಾಗದೆ ಉಳಿದಿದೆ. ಇದಕ್ಕೆ ಹಾಸನ ಜಿಲ್ಲೆಯವರು ಕಡಿವಾಣ ಹಾಕುತ್ತಿದ್ದಾರೆ ಎಂದು ಮಾಜಿ ಸಚಿವ ಟಿ.ಬಿ ಜಯಚಂದ್ರ ಆರೋಪಿಸಿದ್ದಾರೆ.
ತಿಪಟೂರಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹೇಮಾವತಿ ಜಲಾಶಯದಿಂದ ಹಾಸನ ಜಿಲ್ಲೆಗೆ 18 ಟಿಎಂಸಿ ನೀರು ಮಾತ್ರ ನಿಗದಿಯಾಗಿದೆ. ಆದರೆ ಅವರು 40 ಟಿಎಂಸಿ ನೀರು ಬಳಕೆ ಮಾಡುತ್ತಿದ್ದಾರೆ. ಇನ್ನೊಂದೆಡೆ ತುಮಕೂರು ಜಿಲ್ಲೆಗೆ 25 ಟಿಎಂಸಿ ನೀರು ಹರಿಸದೆ, ಕೇವಲ 20 ಟಿಎಂಸಿ ನೀರನ್ನು ಮಾತ್ರ ಹರಿಸಲಾಗುತ್ತಿದೆ. ಉಳಿದ 5 ಟಿಎಂಸಿ ನೀರು ಬಿಡುತ್ತಿಲ್ಲ ಎಂದು ತಿಳಿಸಿದರು.
ನನ್ನ ಅಧಿಕಾರ ಅವಧಿಯಲ್ಲಿ ಹೇಮಾವತಿ ಜಲಾಶಯದ ನಾಲಾ ಅಗಲೀಕರಣ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿತ್ತು. ಹೀಗಾಗಿ ನಿಗದಿಯಾದಂತೆ ನೀರು ಹರಿದು ಬರಬೇಕಿತ್ತು ಎಂದು ತಿಳಿಸಿದರು.