ತುಮಕೂರು: ಜಿಲ್ಲೆಯ ಕೊರಟಗೆರೆ ತಾಲೂಕಿನ ತುಂಬಾಡಿ ಗ್ರಾಮದ ಬಳಿ ಕಾರಿನಲ್ಲಿ ವ್ಯಕ್ತಿಯೊಬ್ಬನ ಮೃತದೇಹ ಪತ್ತೆಯಾಗಿದೆ.
ಬೆಂಗಳೂರಿನ ನಿಸಾರ್ ಅಹ್ಮದ್ (48) ಮೃತ ದುರ್ದೈವಿಯಾಗಿದ್ದು, ಕುತ್ತಿಗೆ, ತಲೆ, ಎದೆಗೆ ಚಾಕುವಿನಿಂದ ಚುಚ್ಚಿರುವ ಗುರುತುಗಳು ಕಂಡು ಬಂದಿವೆ. ಘಟನಾ ಸ್ಥಳದಲ್ಲಿ ಚಾಕು ಪತ್ತೆಯಾಗಿದ್ದು, ಇದು ಕೊಲೆಯೋ, ಆತ್ಮಹತ್ಯೆಯೋ ಎಂಬುದು ತಿಳಿದು ಬಂದಿಲ್ಲ.
ಕಾರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು, ನಿನ್ನೆ ಮಧ್ಯರಾತ್ರಿ ಸುಮಾರು 12 ಗಂಟೆ ಸುಮಾರಿನಲ್ಲಿ ಈ ಘಟನೆ ನಡೆದಿರಬಹುದು ಎಂದಿದ್ದಾರೆ. ತುಂಬಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲೆಯ ಎದುರು ಮರಕ್ಕೆ ಡಿಕ್ಕಿ ಹೊಡೆದ ರೀತಿಯಲ್ಲಿ ಕಾರನ್ನು ದುಷ್ಕರ್ಮಿಗಳು ನಿಲ್ಲಿಸಿದ್ದಾರೆ. ಕಾರಿನಲ್ಲಿ ನಿಸಾರ್ ಅಹ್ಮದ್ ಶವ ಪತ್ತೆಯಾಗಿದೆ.
ಕೊಲೆಯಾಗಿರುವ ನಿಸಾರ್ ಅಹ್ಮದ್ ಪತ್ನಿ ಬೆಂಗಳೂರಿನಲ್ಲಿದ್ದು, ಆಕೆಯನ್ನು ಸಂಪರ್ಕಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಬರುವಂತೆ ಸೂಚಿಸಿದ್ದಾರೆ. ಆತನ ಪತ್ನಿ ಪೊಲೀಸರಿಗೆ ನೀಡಿರುವ ಮಾಹಿತಿಯ ಪ್ರಕಾರ ನಿಸಾರ್ ಅಹ್ಮದ್ ಟ್ಯಾಕ್ಸಿ ಚಾಲಕನಾಗಿದ್ದು, ಪತ್ತೆಯಾಗಿರುವ ಟ್ಯಾಕ್ಸಿ ಅವರದ್ದೇ ಎಂದು ತಿಳಿದು ಬಂದಿದೆ. ಘಟನೆಯ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.