ತುಮಕೂರು: ಮಧುಗಿರಿ ವಿಧಾನಸಭೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಸಂಬಂಧಿಸಿದಂತೆ ಸಂಸದ ಜಿ. ಎಸ್. ಬಸವರಾಜ್ ಮತ್ತು ಶಾಸಕ ವೀರಭದ್ರಯ್ಯ ನಡುವೆ ನಡೆಯುತ್ತಿರೋ ಆರೋಪ-ಪ್ರತ್ಯಾರೋಪ ಚರ್ಚೆಗೆ ಗ್ರಾಸವಾಗಿದೆ.
ಮಧುಗಿರಿ ಕ್ಷೇತ್ರದಲ್ಲಿನ ಅಭಿವೃದ್ಧಿ ವಿಷಯದಲ್ಲಿ ನನಗೆ ಸಹಕಾರ ನೀಡುತ್ತಿಲ್ಲ. ಹೀಗಾಗಿ ನಾನು ಕೂಡ ಅವನನ್ನು ದೂರವಿಟ್ಟಿದ್ದೇನೆ ಎಂದು ಸಂಸದ ಜಿ.ಎಸ್. ಬಸವರಾಜ್ ಅವರು ಶಾಸಕ ವೀರಭದ್ರಯ್ಯ ಅವರನ್ನು ಕಟುವಾಗಿ ಟೀಕಿಸಿದ್ದಾರೆ. ಅಲ್ಲದೆ, ಯಾರಿಂದ ಶಾಸಕನಾಗಿದ್ದೇನೆ ಎಂಬುದನ್ನು ಮರೆತಿದ್ದಾನೆ ಎಂದು ಗುಡುಗಿದ್ದಾರೆ.
ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಪುರವರ ಕೆರೆ ಅಭಿವೃದ್ಧಿಗೆ ಶಾಸಕ ವೀರಭದ್ರಯ್ಯ ಸಹಕಾರ ನೀಡುತ್ತಿಲ್ಲ ಎಂದು ಗಂಭೀರ ಆರೋಪವನ್ನು ಸಂಸದ ಜಿ.ಎಸ್. ಬಸವರಾಜ್ ಮಾಡಿದರು. ಪಿಎಂಜಿಎಸ್ ವೈ ಯೋಜನೆ ಕೇಂದ್ರ ಸರ್ಕಾರದ್ದಾಗಿದ್ದು, ಅದನ್ನು ನಾನೇ ತಂದಿದ್ದೇನೆ ಎಂದು ಸುಳ್ಳು ಹೇಳುತ್ತಿದ್ದಾರೆ. ಬೋರ್ವೆಲ್ ಮತ್ತು ಜಾಕ್ವೆಲ್ ಎಲ್ಲಿದೆ ಎಂದು ಶಾಸಕ ವೀರಭದ್ರಯ್ಯರಿಗೆ ಗೊತ್ತಿಲ್ಲದಂತಾಗಿದೆ ಎಂದು ಸಂಸದರು ಟೀಕಿಸಿದ್ದಾರೆ.