ತುಮಕೂರು: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗಳನ್ನು ತಡೆದು ಹಣ ವಸೂಲಿ ಮಾಡುತ್ತಿದ್ದ ವಿಡಿಯೋ ಬಾರಿ ವೈರಲ್ ಆಗುತ್ತಿದ್ದಂತೆ ಜಿಲ್ಲಾ ಪೊಲೀಸ್ ಇಲಾಖೆ ಸಿಬ್ಬಂದಿಯ ವಿರುದ್ಧ ಅಮಾನತು ಆದೇಶ ಹೊರಡಿಸಿ ಕಠಿಣ ಕ್ರಮ ಕೈಗೊಂಡಿದೆ. ಓರ್ವ ಎಎಸ್ಐ ಸೇರಿ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಕಳ್ಳಂಬೆಳ್ಳ ಠಾಣೆಯ ಎಎಸ್ಐ ಚಿದಾನಂದ ಸ್ವಾಮಿ, ಹಾಗೂ ಪೊಲೀಸ್ ಜೀಪ್ ಚಾಲಕ ಚಿಕ್ಕ ಹನುಮಯ್ಯ ಅಮಾನತು ಆಗಿದ್ದಾರೆ. ತುಮಕೂರು ಎಸ್ಪಿ ರಾಹುಲ್ ಕುಮಾರ್ ಶಹಪುರ್ ವಾಡ್ ಆದೇಶ ಹೊರಡಿಸಿದ್ದಾರೆ.
ಶಿರಾ ತಾಲೂಕಿನ ವ್ಯಾಪ್ತಿಯಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ, ಲಾರಿಗಳನ್ನು ತಡೆದು ಪೊಲೀಸರು ಹಣ ವಸೂಲಿ ಮಾಡುತ್ತಿದ್ದರು. 200, 300 ರೂಪಾಯಿ ಹಣ ವಸೂಲಿ ಮಾಡುತ್ತಿದ್ದ ಪೊಲೀಸರು, ಲಾರಿ ಚಾಲಕರಿಂದ ಹಣ ಪಡೆಯುವ ದೃಶ್ಯ ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿದೆ. ಹಣ ಪಡೆಯುತ್ತಿದ್ದ ಇಬ್ಬರು ಪೊಲೀಸರಿಗೆ ಕ್ಲಾಸ್ ತೆಗೆದುಕೊಂಡಿದ್ದ ಸಾರ್ವಜನಿಕರು, ಪೊಲೀಸರು ಹಣ ಪಡೆಯುವ ದೃಶ್ಯ ಶೂಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದರು. ಈ ಬಗ್ಗೆ ವರದಿ ನೀಡುವಂತೆ ಶಿರಾ ಪೊಲೀಸ್ ಇನ್ಸ್ಪೆಕ್ಟರ್ಗೆ ತುಮಕೂರು ಎಸ್ಪಿ ರಾಹುಲ್ ಕುಮಾರ್ ಶಹಪುರ್ ವಾಡ್ ಸೂಚನೆ ನೀಡಿದ್ದರು. ವರದಿಯಲ್ಲಿ ಪೊಲೀಸರು ಹಣ ಪಡೆಯುವುದು ಸಾಬೀತಾದ ಹಿನ್ನೆಲೆಯಲ್ಲಿ ಚಿದಾನಂದ ಸ್ವಾಮಿ ಹಾಗೂ ಚಿಕ್ಕಹನುಮಯ್ಯರನ್ನು ಅಮಾನತು ಮಾಡಲಾಗಿದೆ.
ಪ್ರಕರಣದ ಸಂಪೂರ್ಣ ವಿವರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ನಿಲ್ಲಿಸಿ, ಚಾಲಕರಿಂದ ಹಣ ವಸೂಲಿ ಮಾಡುತ್ತಿರುವುದನ್ನು ಅದೇ ದಾರಿಯಲ್ಲಿ ವಾಹನವೊಂದರಲ್ಲಿ ಹೋಗುತ್ತಿದ್ದ ಸಾರ್ವಜನಿಕರು ದೂರದಿಂದಲೇ ವಿಡಿಯೋ ಮಾಡಿದ್ದಾರೆ. ಹಣ ತೆಗೆದುಕೊಳ್ಳುತ್ತಿದ್ದಂತೆ ಪೊಲೀಸ್ ಜೀಪ್ ಹತ್ತಿರ ಹೋದ ಸಾರ್ವಜನಿಕರು, ಪೊಲೀಸರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಲಾರಿ ಚಾಲಕರಿಂದ ತೆಗೆದುಕೊಂಡಿರುವ ಹಣ ಹಿಂತಿರುಗಿಸುವಂತೆ ಹೇಳಿದ್ದಾರೆ. ಹಣ ಹಿಂತಿರುಗಿಸಲು ಹೇಳುತ್ತಿದ್ದಂತೆ, ಪೊಲೀಸರು ಜೀಪು ಸ್ಟಾರ್ಟ್ ಮಾಡಿ ಹೊರಡಲು ಸಿದ್ಧರಾಗಿದ್ದಾರೆ. ಆದರೆ ಸಾರ್ವಜನಿಕರು ಅವರನ್ನು ತಡೆದು ನಿಲ್ಲಿಸಿ, ಹಣ ವಾಪಸ್ ನೀಡುವಂತೆ ಹೇಳಿದ್ದಾರೆ.