ತುಮಕೂರು :ಕನ್ನಡ ಚಿತ್ರರಂಗದ ಹೆಸರಾಂತ ಹಾಸ್ಯನಟ ನರಸಿಂಹರಾಜು ಅವರ ಹುಟ್ಟೂರಾದ ತಿಪಟೂರು ಪಟ್ಟಣದಲ್ಲಿ ಅವರ ಹೆಸರಿನಲ್ಲಿ ನಿರ್ಮಾಣವಾಗಬೇಕಿದ್ದ ರಂಗಮಂದಿರ ಅರ್ಧಕ್ಕೆ ನಿಂತಿದೆ. ಅದನ್ನು ಪೂರ್ಣಗೊಳಿಸಬೇಕು ಎಂದು ನರಸಿಂಹರಾಜು ಪುತ್ರಿ ಸುಧಾ ನರಸಿಂಹರಾಜು ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಹಾಸ್ಯಚಕ್ರವರ್ತಿ ನರಸಿಂಹರಾಜು ಅವರ ಹೆಸರಿನಲ್ಲಿ ನಿರ್ಮಾಣವಾಗ್ತಿರುವ ರಂಗಮಂದಿರ ಪೂರ್ಣಗೊಳಿಸುವಂತೆ ನಟಿ ಸುಧಾ ನರಸಿಂಹರಾಜು ಆಗ್ರಹಿಸಿರುವುದು.. ತುಮಕೂರಿನಲ್ಲಿ ಈಟಿವಿ ಭಾರತ್ ಜೊತೆ ಮಾತನಾಡಿದ ಅವರು, ನರಸಿಂಹರಾಜು ಅವರ ನೂರನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆ ಈ ಬಾರಿ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ರಂಗಮಂದಿರವನ್ನು ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ನೆನಗುದಿಗೆ ಬಿದ್ದಿರುವ ನರಸಿಂಹರಾಜು ಅವರ ಹೆಸರಿನ ರಂಗಮಂದಿರ ಪೂರ್ಣಗೊಳಿಸುವಂತೆ ಹೆಚ್. ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಮನವಿ ಮಾಡಲಾಗಿತ್ತು. ಆದರೆ, ಅದಕ್ಕೆ ಸೂಕ್ತ ಸ್ಪಂದನೆ ನಂತರದ ದಿನಗಳಲ್ಲಿ ದೊರೆಯಲಿಲ್ಲ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ನೆನಗುದಿಗೆ ಬಿದ್ದಿತ್ತು ಎಂದರು.
ಹೀಗಾಗಿ, ನರಸಿಂಹರಾಜು ಅವರ ದಶಮಾನೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ಆದರೂ ಸರ್ಕಾರ ಇದನ್ನು ಪರಿಗಣಿಸಬೇಕು. ಅಲ್ಲದೆ, ರಾಜ್ಯಾದ್ಯಂತ ಕಾರ್ಯಕ್ರಮವನ್ನು ಆಯೋಜನೆ ಮಾಡಲು ಈಗಾಗಲೇ ಸರ್ವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಓದಿ:ಆಹೋರಾತ್ರಿ ಧರಣಿ ಮುಗಿಸುತ್ತಿದ್ದೇವೆ, ಸರ್ಕಾರದ ವಿರುದ್ಧದ ಹೋರಾಟ ನಿಲ್ಲಲ್ಲ: ಸಿದ್ದರಾಮಯ್ಯ