ತುಮಕೂರು: 'ಬ್ಲೂ ಬೇಬಿ ಸಿಂಡ್ರೋಮ್' ಸಮಸ್ಯೆಯಿಂದ ಬಳಲುತ್ತಿದ್ದ ಆರೂವರೆ ವರ್ಷದ ಬಾಲಕಿಗೆ ನಗರದ ಸಿದ್ದಾರ್ಥ ಹಾರ್ಟ್ ಸೆಂಟರ್ನ ಡಾ. ತಮೀಮ್ ಅಹಮದ್ ನೇತೃತ್ವದ ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಿ ಮರುಜೀವ ನೀಡಿದ್ದಾರೆ.
ಸಿದ್ದಾರ್ಥ ವೈದ್ಯಕೀಯ ಕಾಲೇಜಿನ ಕುಲಾಧಿಪತಿ ಜಿ. ಪರಮೇಶ್ವರ್ ಮಾತನಾಡಿದರು ಈ ಕುರಿತು ಸಿದ್ದಾರ್ಥ ವೈದ್ಯಕೀಯ ಕಾಲೇಜಿನ ಕುಲಾಧಿಪತಿ ಜಿ. ಪರಮೇಶ್ವರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಸಂಕೀರ್ಣ ಸ್ಥಿತಿಯಲ್ಲಿದ್ದ ಬಾಲಕಿಗೆ ಚಿಕಿತ್ಸೆ ನೀಡಿರುವುದು ತುಮಕೂರಿನಲ್ಲಿ ಇದೇ ಮೊದಲು ಎಂದು ತಿಳಿಸಿದರು.
ಹುಟ್ಟಿನಿಂದಲೇ ಬ್ಲೂ ಬೇಬಿ ಸಿಂಡ್ರೋಮ್ ಸಮಸ್ಯೆ ಹೊಂದಿದ್ದ ಬಾಲಕಿಗೆ ಉಚಿತವಾಗಿ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಜಿಲ್ಲೆಯ ಬಾಲಕಿಗೆ ಸುದೀರ್ಘ 5 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಲಾಯಿತು. ಮಗು ಈಗ ಸಂಪೂರ್ಣವಾಗಿ ಆರೋಗ್ಯವಾಗಿದೆ ಎಂದಿದ್ದಾರೆ.
ರೋಗ ಲಕ್ಷಣದ ಬಗ್ಗೆ :ಬಾಲಕಿ ಹೃದಯದಲ್ಲಿ ಆಮ್ಲಜನಕಯುಕ್ತ ರಕ್ತವನ್ನು ಪ್ರತ್ಯೇಕಿಸಲು ಸಾಧ್ಯವಾಗುತ್ತಿರಲಿಲ್ಲ. ರಕ್ತ ಶ್ವಾಸಕೋಶಕ್ಕೆ ಹೋಗಿ ಶುದ್ದಿಯಾಗಿ ವಾಪಸ್ ಹೃದಯಕ್ಕೆ ಬಂದು ರಕ್ತನಾಳದ ಮೂಲಕ ಸಂಚರಿಸುತ್ತಿರಲಿಲ್ಲ. ಅಂದರೆ ಶುದ್ದ ರಕ್ತ ಮತ್ತು ಅಶುದ್ಧ ರಕ್ತ (ಡಿ ಆಕ್ಸಿಜೆನೇಟೆಡ್ ರಕ್ತ) ಎರಡೂ ಒಂದೇ ಸ್ಥಳದಲ್ಲಿ ಸೇರುತ್ತಿತ್ತು. ಇದರಿಂದಾಗಿ ದೇಹದ ಪ್ರಮುಖ ಅಂಗಗಳಿಗೆ ಅಗತ್ಯವಾದ ಆಮ್ಲಜನಕದ ಪೂರೈಕೆ ಸಾಧ್ಯವಾಗುತ್ತಿರಲಿಲ್ಲ. ಮೊದಲು ಆಕ್ಸಿಜನ್ ಪ್ರಮಾಣ ಶೇ.80ರಷ್ಟು ಕಡಿಮೆ ಇತ್ತು. ಇಂತಹ ಪರಿಸ್ಥಿತಿಯಿಂದ ಹೊರಬರಲು ಈ ಶಸ್ತ್ರ ಚಿಕಿತ್ಸೆ ನಡೆಸಲಾಯಿತು.
ಕಾರ್ಡಿಯಾಕ್ ಫ್ರೊಂಟಿಟ್ ಸಂಸ್ಥೆ ನಿರ್ದೇಶಕ ಡಾ. ತಮೀಮ್ ಅಹಮದ್ ಅವರು ಈ ಕುರಿತು ಮಾತನಾಡಿದರು. ಆಗಸ್ಟ್ 6 ರಂದು ಬಾಲಕಿಗೆ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಹಾರ್ಟ್ ಸೆಂಟರ್ನಲ್ಲಿ ಈವರೆಗೂ 27 ತೆರೆದ ಶಸ್ತ್ರ ಚಿಕಿತ್ಸೆ, 50 ಕ್ಕೂ ಹೆಚ್ಚು ಆಂಜಿಯೋ ಪ್ಲಾಸ್ಟಿ, ಆಂಜಿಯೊಗ್ರಾಮ್ ಸೇರಿದಂತೆ 300ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದರು.
ಓದಿ:ರಾಜ್ಯದಲ್ಲಿಂದು 1,857 ಮಂದಿಗೆ ಕೋವಿಡ್ ದೃಢ: 30 ಸೋಂಕಿತರ ಸಾವು