ತುಮಕೂರು: ವಿಶ್ವವಿದ್ಯಾನಿಲಯದ ಪಕ್ಕದ ಕುವೆಂಪು ನಗರದಲ್ಲಿರುವ ಪಿ.ಜಿ. ಹಾಸ್ಟೆಲ್ ಅವ್ಯವಸ್ಥೆಯ ಆಗರವಾಗಿರುವುದಕ್ಕೆ ರೊಚ್ಚಿಗೆದ್ದ ವಿದ್ಯಾರ್ಥಿಗಳು ಇಂದು ಪ್ರತಿಭಟನೆ ನಡೆಸಿದರು.
ಅವ್ಯವಸ್ಥೆಯ ಆಗರವಾಯ್ತು ತುಮಕೂರು ವಿವಿಯ ಪಿಜಿ ಹಾಸ್ಟೆಲ್: ವಿದ್ಯಾರ್ಥಿಗಳಿಂದ ಪ್ರೊಟೆಸ್ಟ್ - students Protest
ತುಮಕೂರು ವಿಶ್ವವಿದ್ಯಾನಿಯದ ಪಕ್ಕದಲ್ಲಿರುವ ಕುವೆಂಪು ನಗರದಲ್ಲಿರುವ ಪಿ.ಜಿ ಹಾಸ್ಟೆಲ್ ಅವ್ಯವಸ್ಥೆಯ ಆಗರವಾಗಿದೆ. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ರು.
ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ, ಶಿಕ್ಷಣಕ್ಕೆ ಯಾವುದೇ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ, ಹಾಸ್ಟೆಲ್ ಸೌಲಭ್ಯ ಕಲ್ಪಿಸುತ್ತದೆ. ಆದರೆ ಹಾಸ್ಟೆಲ್ಗಳು ಸರಿಯಾದ ನಿರ್ವಹಣೆ ಇಲ್ಲದೆ, ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುವುದು ಮಾತ್ರ ತಪ್ಪಿಲ್ಲ. ಇಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಎದುರಾಗಿದ್ದು,ಕೆಲ ಕೊಠಡಿಗಳಲ್ಲಿ ವಿದ್ಯುತ್ ಬಲ್ಪ್ಗಳೇ ಇಲ್ಲ. ಶೌಚಾಲಯದ ಬಾಗಿಲುಗಳು ಮುರಿದು ಹೋಗಿದ್ದರೂ ರಿಪೇರಿ ಮಾಡುವ ಕೆಲಸವಾಗಿಲ್ಲ. ಅಲ್ಲದೆ ತಮಗಾಗಿ ಬಂದಿರುವ ಹಾಸಿಗೆಗಳನ್ನು ಸಹ ಕೊಡುತ್ತಿಲ್ಲ ಎಂದು ವಿದ್ಯಾರ್ಥಿಗಳು ಅರೋಪಿಸಿದರು.
ವಿದ್ಯಾರ್ಥಿಗಳ ಪ್ರತಿಭಟನೆ ವಿಷಯ ತಿಳಿದ ವಿವಿ ಪರೀಕ್ಷಾಂಗ ವಿಭಾಗದ ಕುಲಸಚಿವ ಗಂಗಾ ನಾಯಕ್ ಸ್ಥಳಕ್ಕಾಗಮಿಸಿ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಿ,ಒಂದು ತಿಂಗಳಲ್ಲಿ ಅವ್ಯವಸ್ಥೆ ಸರಿಪಡಿಸುವುದಾಗಿ ತಿಳಿಸಿದರು. ಇನ್ನೆರಡು ದಿನಗಳಲ್ಲಿ ಹಾಸ್ಟೆಲ್ನ ಅವ್ಯವಸ್ಥೆಯನ್ನು ಸರಿಪಡಿಸಬೇಕು ಅಲ್ಲಿವರೆಗೂ ಪ್ರತಿಭಟನೆ ನಡೆಸಲಾಗುವುದು ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದರು. ನಂತರ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊಫೆಸರ್ ವೈ ಎಸ್ ಸಿದ್ದೇಗೌಡ ಭೇಟಿ ನೀಡಿ, ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು.