ತುಮಕೂರು :ಪ್ರತಿವರ್ಷ ಎಸ್ಟಿಪಿ ಮತ್ತು ಟಿಎಸ್ಪಿ ಯೋಜನೆಯಡಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಉಚಿತ ಲ್ಯಾಪ್ ಟಾಪ್ ಹಾಗೂ ಸಂಶೋಧನಾ ಧನ ಸಹಾಯವನ್ನು ಅತೀ ಶೀಘ್ರದಲ್ಲಿ ನೀಡಬೇಕೆಂದು ಆಗ್ರಹಿಸಿ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಗಳ ಕಚೇರಿ ಮುಂದೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಲ್ಯಾಪ್ ಟಾಪ್, ಧನ ಸಹಾಯ ನೀಡಲು ವಿಳಂಬ: ತುಮಕೂರು ವಿವಿ ಮುಂದೆ ವಿದ್ಯಾರ್ಥಿಗಳ ಪ್ರತಿಭಟನೆ
ಎಸ್ಟಿಪಿ ಮತ್ತು ಟಿಎಸ್ಪಿ ಯೋಜನೆಯಡಿ ಪ್ರತೀ ವರ್ಷ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಲ್ಯಾಪ್ ಟಾಪ್ ಮತ್ತು ಸಂಶೋಧನಾ ಧನ ಸಹಾಯವನ್ನು ನೀಡಲು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ತುಮಕೂರು ವಿವಿ ಮುಂದೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಸೆಪ್ಟಂಬರ್ನಲ್ಲಿ ಪ್ರಾರಂಭವಾಗುವ ಪರೀಕ್ಷೆಗಳನ್ನು ಹೊರ ಜಿಲ್ಲೆಯಯ ವಿದ್ಯಾರ್ಥಿಗಳು ಹೇಗೆ ಎದುರಿಸಬೇಕು. ವಿಶ್ವವಿದ್ಯಾನಿಲಯಕ್ಕೆ ಆಗಮಿಸಿ ಪರೀಕ್ಷೆ ಬರೆಯಬೇಕೇ ಅಥವಾ ಸ್ಥಳೀಯ ಕಾಲೇಜುಗಳಲ್ಲಿ ಬರೆಯಲು ಅವಕಾಶ ನೀಡುವರೇ ಎಂಬ ಬಗ್ಗೆ ಸ್ಪಷ್ಟನೆ ನೀಡಬೇಕು. ಮಾರ್ಚ್ 14 ರಂದು ಮೇ ತಿಂಗಳ ಒಳಗಾಗಿ ಅಂತಿಮ ಹಂತದ ಎಲ್ಲಾ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡುವುದಾಗಿ ತಿಳಿಸಿದ್ದರು. ಆದರೆ ಈಗ ಕೊರೊನಾ ನೆಪ ಹೇಳಿ ಲ್ಯಾಪ್ ಟಾಪ್ ನೀಡಿಲ್ಲ. ಇದರಿಂದ ಸುಮಾರು 315 ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ವಿದ್ಯಾರ್ಥಿ ನವೀನ್, ಪ್ರತೀ ವರ್ಷ ಎಸ್ಟಿಪಿ ಮತ್ತು ಟಿಎಸ್ಪಿ ಯೋಜನೆಯಡಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಮತ್ತು ಸಂಶೋಧನೆಗೆ ಧನ ಸಹಾಯ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಹಣವಿಲ್ಲ ಎಂಬ ಕಾರಣ ಹೇಳಿ ಲ್ಯಾಪ್ ಟಾಪ್ ವಿತರಣೆ ಮಾಡಿಲ್ಲ, ಧನ ಸಹಾಯವನ್ನೂ ನೀಡಿಲ್ಲ. ಇದರಿಂದ ನಮಗೆ ಸಮಸ್ಯೆಯಾಗುತ್ತಿದೆ. ಕಳೆದ ನಾಲ್ಕು ತಿಂಗಳಿನಿಂದಲೂ ಲ್ಯಾಪ್ ಟಾಪ್ ನೀಡಲಾಗುವುದು ಎಂದು ಹೇಳಿಕೊಂಡು ಬರಲಾಗುತ್ತಿದೆ. ಆದರೆ ಈಗ ಸರ್ಕಾರದಲ್ಲಿ ಹಣವಿಲ್ಲ ಎಂದು ಹೇಳುತ್ತಿದ್ದಾರೆ ಎಂದರು.