ತುಮಕೂರು: ಲಿಂಗೈಕ್ಯರಾಗಿರುವ ಶ್ರೀ ಶಿವಕುಮಾರ ಸ್ವಾಮೀಜಿಯವರ 112ನೇ ಜಯಂತಿ ಕಾರ್ಯಕ್ರಮವನ್ನು ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮೈಸೂರು ರಾಜವಂಶಸ್ಥ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕಾರ್ಯಕ್ರಮವನ್ನು ಉದ್ಘಾಟಿಸಿದ್ದು, ನಂತರ ಮಾತನಾಡಿ ಶ್ರೀ ಮಠ ಮತ್ತು ಅರಮನೆಯ ನಡುವೆ ಇರುವ ಸಂಬಂಧ ಅನನ್ಯವಾಗಿದ್ದು, ಅದನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ರಾಜ್ಯದಲ್ಲಿ ಅನೇಕ ನಾಯಕರು ಹೆಸರು ಮಾಡಿದ್ದಾರೆ. ಅದರಲ್ಲಿ ಮೊದಲನೆ ಸಾಲಿನಲ್ಲಿ ಬರುವವರು ಶಿವಕುಮಾರ ಸ್ವಾಮೀಜಿಯವರು. ನಮಗೆ ಜೀವನದಲ್ಲಿ ಹೇಗೆ ನಡೆಯಬೇಕು ಎಂದು ಶ್ರೀಗಳು ತಿಳಿಸಿದ್ದಾರೆ. ಅವರ ಕಾಯಕ ನಮ್ಮೆಲ್ಲರಿಗೂ ಮಾರ್ಗದರ್ಶನ ಎಂದು ತಿಳಿಸಿದರು.
ಉಜ್ಜಯಿನಿಯ ಶ್ರೀ ಉಜ್ಜಯಿನಿ ಸದ್ಧರ್ಮ ಸಿಂಹಾಸನ ಮಹಾಸಂಸ್ಥಾನ ಮಠದ ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ಹಣದ ಮಾಲೀಕನಾಗುವ ಮೊದಲು ಮನದ ಜ್ಞಾನದ ಮಾಲೀಕನಾಗುವಂತೆ ಪ್ರತಿಯೊಬ್ಬರಿಗೂ ಶ್ರೀಗಳು ಆಶಿಸುತ್ತಿದ್ದರು. ಶ್ರೀಗಳು ಬಡವ ಶ್ರೀಮಂತ ಎಂದು ಭೇದ- ಭಾವ ಮಾಡದೆ ಎಲ್ಲರಿಗೂ ಒಂದೇ ರೀತಿಯಾಗಿ ಆಶೀರ್ವಾದ ನೀಡುತ್ತಿದ್ದರು. ಶ್ರೀಗಳಲ್ಲಿ ತಂದೆ- ತಾಯಿಯ ಮಮತೆ, ಹಾರೈಸುವ ಗುಣ, ಎಲ್ಲಾ ಮಕ್ಕಳನ್ನು ಒಂದೇ ರೀತಿ ನೋಡುವ ದೃಷ್ಟಿಯಿತ್ತು. ಆದುದರಿಂದಲೇ ಇಂದು ಜಗತ್ತಿನ ಶ್ರೇಷ್ಠ ಶರಣರಲ್ಲಿ ಸಿದ್ದಗಂಗಾ ಶ್ರೀಗಳು ಒಬ್ಬರಾಗಿದ್ದಾರೆ. ಶ್ರೀಗಳ ಜನ್ಮ ದಿನೋತ್ಸವವನ್ನು ಅಂತಾರಾಷ್ಟ್ರೀಯ ದಾಸೋಹ ದಿನ ಎಂದು ಘೋಷಿಸಬೇಕು ಎಂದು ಅಭಿಪ್ರಾಯಪಟ್ಟರು.