ತುಮಕೂರು:ಸದ್ಯ ಯೋಗಾಸನ ಪ್ರಪಂಚದಾದ್ಯಂತ ಜನರ ದಿನಚರಿಯ ಒಂದು ಭಾಗವಾಗಿದೆ. ಭಾರತ ಯೋಗದಲ್ಲಿ ವಿಶ್ವ ಗುರುವಾಗಿದೆ. ಯೋಗಾಸನದಿಂದ ಆರೋಗ್ಯ ಸುಧಾರಿಸಿಕೊಳ್ಳಬಹುದು ಎಂಬ ಪರಿಕಲ್ಪನೆ ಜನರ ಮನಸ್ಸಿನಲ್ಲಿ ಮೂಡಿದ್ದು, ಜನರು ಯೋಗ ಗುರುಗಳ ಹುಡುಕಾಟದಲ್ಲಿದ್ದಾರೆ. ಅದ್ರೆ ಅಂತಹ ಯೋಗ ಶಿಕ್ಷಕರನ್ನ ಹುಟ್ಟುಹಾಕುವ ಗುರುಗಳಳೊಬ್ಬರು ಕಲ್ಪತರು ನಾಡಿನಲ್ಲಿರುವುದು ವಿಶೇಷ.
ಇವರ ಹೆಸರು ನಾಗರಾಜ್ ಯೋಗ ಗುರು. ತಮ್ಮ ಪೂರ್ವಜರಿಂದ ಕಲಿತಿರುವ ಯೋಗಾಸನದ ಮಹತ್ವವನ್ನು ಸಾರುತ್ತ ದೇಶ ವಿದೇಶಗಳಲ್ಲಿ ಯೋಗದ ಪ್ರಾಮುಖ್ಯತೆಯನ್ನು ಸಾರುತ್ತಿದ್ದಾರೆ. ಅದರ ಪ್ರಯೋಜನಗಳನ್ನು ಜನರಿಗೆ ತಿಳಿಹೇಳುತ್ತಾರೆ. ಬಹುಮುಖ್ಯವಾಗಿ ನಿಯಮಬದ್ಧವಾದ ಯೋಗದ ಆಸನಗಳನ್ನು ಹೇಳಿಕೊಡುವ ಶಿಕ್ಷಕರನ್ನು ತಯಾರು ಮಾಡುವ ಕಾಯಕದಲ್ಲಿ ತೊಡಗಿದ್ದಾರೆ.
ಕಲ್ಪತರು ನಾಡಿನಲ್ಲಿ ಯೋಗ ಗುರು ಆಶ್ರಮ, ಶಾಲೆ, ಗುರುಕುಲಗಳಿಗೆ ಭೇಟಿ ನೀಡುವ ನಾಗರಾಜ್, ಯೋಗಾಸನವನ್ನು ಹೇಳಿಕೊಡುತ್ತಾರೆ. ದೇಶದ ಬಹುತೇಕ ಯೋಗ ಶಿಕ್ಷಕರು ಇವರಿಂದಲೇ ಶಿಕ್ಷಣವನ್ನು ಪಡೆದಿದ್ದಾರೆ ಎನ್ನುವುದು ವಿಶೇಷ. ಅಲ್ಲದೆ ಯುರೋಪ್ನ ಬಹುತೇಕ ದೇಶಗಳಲ್ಲಿ ಮತ್ತು ಅಮೆರಿಕಾ ದೇಶದ ವಿವಿಧೆಡೆ ಯೋಗವನ್ನು ಹೇಳಿಕೊಡುವ ಮೂಲಕ ತರಬೇತಿ ನೀಡಿ ಶಿಕ್ಷಕರನ್ನಾಗಿ ಮಾಡುತ್ತಾರೆ.
ಪಾರಂಪರಿಕ ಯೋಗದ ಆಸನಗಳನ್ನು ಶಿಕ್ಷಕರಿಗೆ ಧಾರೆ ಎರೆಯುವ ಮೂಲಕ ಹೆಚ್ಚು ಜನರಿಗೆ ತಲುಪಿಸುವ ಮಹತ್ವದ ಕಾರ್ಯದಲ್ಲಿ ತೊಡಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯೋಗಾಸನದ ಸ್ಪರ್ಧೆಗಳು ಹೆಚ್ಚಾಗಿ ನಡೆಯುತ್ತಿವೆ. ಆದರೆ ನಾನು ಇಂತಹ ಸ್ಪರ್ಧೆಗಳಿಗೆ ಒತ್ತು ಕೊಡುವುದಿಲ್ಲ. ಬದಲಾಗಿ ಮನುಷ್ಯನ ಆರೋಗ್ಯದ ಸಮತೋಲ ಕಾಪಾಡುವ ಯೋಗದ ಆಸನಗಳನ್ನು ಕಲಿಸುವ ಶಿಕ್ಷಕರನ್ನು ರೂಪಿಸುವ ದಿಟ್ಟ ಹೆಜ್ಜೆಯನ್ನು ಇರಿಸಿದ್ದೇನೆ.
ಹೆಚ್ಚು ಯೋಗಶಿಕ್ಷಕರನ್ನು ಸಿದ್ಧಗೊಳಿಸಿದರೆ ಅವರು ಸಾರ್ವಜನಿಕರಿಗೆ ಯೋಗದ ಆಸನಗಳನ್ನು ಕಲಿಸುವ ಮೂಲಕ ಮನುಷ್ಯನ ಶಾರೀರಿಕ ಮತ್ತು ಮಾನಸಿಕ ಆರೋಗ್ಯವನ್ನು ಸದೃಢಗೊಳಿಸುವಲ್ಲಿ ಸಹಾಯವಾಗುತ್ತಾರೆ. ಆಗ ಆರೋಗ್ಯಕರ ಪರಿಸರ ನಿರ್ಮಾಣವಾಗಲಿದೆ ಎನ್ನುತ್ತಾರೆ ನಾಗರಾಜ್.