ತುಮಕೂರು : ಇಂದು ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಮಹಾಲಕ್ಷ್ಮಿ ದೇಗುಲದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ಬೆಳಗ್ಗೆಯಿಂದಲೂ ಶಾಂತಿ ಹೋಮ ಸೇರಿದಂತೆ ಪಂಚಾಮೃತ ಅಭಿಷೇಕ ನಡೆಯಿತು. ಸಾವಿರಾರು ಭಕ್ತರು ದೇಗುಲಕ್ಕೆ ಭೇಟಿ ನೀಡಿ, ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ರಾಜ್ಯದ ವಿವಿಧೆಡೆಯಿಂದ ಹಾಗೂ ನೆರೆಯ ಆಂಧ್ರಪ್ರದೇಶದಿಂದಲೂ ಭಕ್ತರು ಬಂದಿದ್ದರು. ಭಕ್ತರಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು.
ಶಿವಮೊಗ್ಗದ ವರಮಹಾಲಕ್ಷ್ಮಿ ಸಂಭ್ರಮ:ಶಿವಮೊಗ್ಗದ ಗಾಂಧಿ ಬಜಾರ್ನ ನಿವಾಸಿ ವೆಂಕಟೇಶ್ ಎಂಬವರ ಪತ್ನಿ ಲಕ್ಷ್ಮೀ ಅವರು ತಮ್ಮ ಮನೆಯಲ್ಲಿ ತಾಯಿ ಲಕ್ಷ್ಮಿದೇವಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ತೆಂಗಿನಕಾಯಿಯಿಂದ ದೇವಿಯ ಮುಖವನ್ನು ತಯಾರು ಮಾಡಿ ಅದಕ್ಕೆ ಸೀರೆ, ರವಿಕೆ ಸೇರಿದಂತೆ ವಿವಿಧ ಒಡವೆಗಳನ್ನು ಹಾಕಿ ಸಿಂಗರಿಸಿದ್ದರು. ಇವರು ಕಳೆದ 25 ವರ್ಷಗಳಿಂದ ಪ್ರತಿ ವರ್ಷ ವರಮಹಾಲಕ್ಷ್ಮೀ ವ್ರತವನ್ನು ಆಚರಿಸಿಕೊಂಡು ಬಂದಿದ್ದಾರೆ. ಈ ಬಾರಿ ಲಕ್ಷ್ಮೀ ಅವರು ಧನಲಕ್ಷ್ಮೀ ಅಲಂಕಾರ ಮಾಡಿದ್ದಾರೆ. ದೇವಿಗೆ ವಿವಿಧ ಡ್ರೈಪ್ರೂಟ್ಸ್ಗಳಿಂದ ನೈವೇದ್ಯ ಮಾಡಲಾಗಿತ್ತು. ಮನೆಗೆ ಬಂದ ಪ್ರತಿ ಮುತ್ತೈದೆಯರಿಗೂ ಅರಿಶಿನ, ಕುಂಕುಮ ನೀಡಿ, ಉಡಿ ತುಂಬಿ ಹರಸಿ ಕಳುಹಿಸಿದ್ದಾರೆ.