ತುಮಕೂರು :ಪವಾಡ ಪುರುಷ ಯಡಿಯೂರಿನ ಶ್ರೀ ಸಿದ್ದಲಿಂಗೇಶ್ವರ ಅವರನ್ನು ಕುರಿತು 1982ರಲ್ಲಿ ಎಸ್ ಪಿ ಬಾಲಸುಬ್ರಮಣ್ಯಂ ಅವರು ಹತ್ತಕ್ಕೂ ಹೆಚ್ಚು ಗೀತೆ ಹಾಡಿದ್ದಾರೆ. ಇಂದಿಗೂ ಸಹ ಅವರು ಹಾಡಿರುವ ಹಾಡುಗಳು ಜೀವಂತವಾಗಿವೆ. ಅದಕ್ಕೆ ಎಸ್‌ಪಿಬಿ ಅವರ ಕಂಠ ಆ ರೀತಿಯ ಮಾಧುರ್ಯ ಹೊಂದಿದೆ ಎಂದು ಹರಿಕಥಾ ವಿದ್ವಾಂಸ ಲಕ್ಷ್ಮಣದಾಸ್ ಗುಣಗಾನ ಮಾಡಿದರು.
ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಸ್ಮರಣಾರ್ಥ ಗಾನ ನಮನ ಕಾರ್ಯಕ್ರಮ ತುಮಕೂರು ಕಲಾವಿದರ ಬಳಗದಿಂದ ನಗರದ ಕನ್ನಡ ಭವನದಲ್ಲಿ ಗಾನ ಗಾರುಡಿಗ ಸ್ವರ ಮಾಂತ್ರಿಕ ಡಾ. ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ನೆನಪಿನಾರ್ಥವಾಗಿ ಗಾನ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಬಾಲಸುಬ್ರಹ್ಮಣ್ಯಂ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಹರಿಕಥಾ ವಿದ್ವಾಂಸ ಲಕ್ಷ್ಮಣದಾಸ್, ಚಲನಚಿತ್ರ ಸಂಗೀತ ಲೋಕದ ಧ್ರುವತಾರೆ, ಚೈತನ್ಯ ಹಾಗೂ ಸಂಪನ್ನರಾದ ಎಸ್ಪಿಬಿ ಅವರಿಗೆ ನುಡಿನಮನ ಕಾರ್ಯಕ್ರಮ ತುಮಕೂರಿನಲ್ಲಿ ಹಮ್ಮಿಕೊಂಡಿರುವುದು ದುಃಖದ ಜೊತೆಗೆ ಅಭಿಮಾನ ಮತ್ತು ಹೆಮ್ಮೆಯ ವಿಚಾರ. ಎಸ್ಪಿಬಿ ಅವರ ಬಗ್ಗೆ ಮಾತನಾಡುವುದು ಕಷ್ಟಸಾಧ್ಯದ ವಿಚಾರ ಎಂದರು.
ಸೌಜನ್ಯಶೀಲರಾದ ಬಾಲಸುಬ್ರಹ್ಮಣ್ಯಂ ಅವರು ಯಾರನ್ನೂ ಸಹ ಗರ್ವದಿಂದ ಕಾಣಲಿಲ್ಲ, ಎಲ್ಲರನ್ನೂ ಆತ್ಮೀಯರಂತೆ ಮಾತನಾಡಿಸುತ್ತಿದ್ದರು. ಎದೆ ತುಂಬಿ ಹಾಡುವೆನು ಎಂಬ ಕಾರ್ಯಕ್ರಮದಲ್ಲಿ ಅವರ ಜೊತೆ ನಾನೂ ಸಹ ತೀರ್ಪುಗಾರನಾಗಿ ಪಾಲ್ಗೊಂಡಿದ್ದೆ. ಹೀಗಾಗಿ, ಅವರ ಜೊತೆಗಿನ ಒಡನಾಟ ಮರೆಯಲು ಸಾಧ್ಯವಿಲ್ಲ ಎಂದರು.