ತುಮಕೂರು:ಈ ದೇಶದಲ್ಲಿಯೇ ಹುಟ್ಟಿ ಬೆಳೆದು, ದೇಶಕ್ಕಾಗಿ ದುಡಿಯುವಂತಹ ಜನರ ಪೌರತ್ವವನ್ನು ಪ್ರಶ್ನಿಸುತ್ತಿದ್ದೀರಲ್ಲವೇ? ಪ್ರಶ್ನಿಸುವ ಅಧಿಕಾರ ನಿಮಗೆ ಯಾರು ನೀಡಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಸ್.ಎನ್ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೌರತ್ವ ಪ್ರಶ್ನಿಸುವ ಅಧಿಕಾರ ನಿಮಗೆ ಯಾರು ನೀಡಿದ್ದಾರೆ ? ಎಸ್.ಎನ್ ಸ್ವಾಮಿ ಆಕ್ರೋಶ! - ಪೌರತ್ವ ಕಾಯ್ದೆ ವಿರೋಧಿಸಿ ತುಮಕೂರಿನಲ್ಲಿ ಪ್ರತಿಭಟನೆ
ಪೌರತ್ವ ಕಾಯ್ದೆ ವಿರೋಧಿಸಿ ತುಮಕೂರಿನಲ್ಲಿ ಪ್ರತಿಭಟನೆ ನಡೆದಿದ್ದು, ಜನರ ಪೌರತ್ವವನ್ನು ಪ್ರಶ್ನಿಸುವ ಅಧಿಕಾರ ನಿಮಗೆ ಯಾರು ನೀಡಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಸ್.ಎನ್ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಬಿಜೆಪಿ ಸರ್ಕಾರದ ಪೌರತ್ವ ಕಾಯ್ದೆ ವಿರೋಧಿಸಿ ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷದಿಂದ ಇಂದು ನಗರದ ಟೌನ್ ಹಾಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ, ಮಾತನಾಡಿದ ಎಸ್.ಎನ್ ಸ್ವಾಮಿ, ಧರ್ಮ ಆಧಾರಿತವಾಗಿ ಪೌರತ್ವ ಮಸೂದೆ ಕಾಯ್ದೆ ಜಾರಿಗೆ ತಂದಿರುವುದನ್ನು ನಾವು ಉಗ್ರವಾಗಿ ಪ್ರತಿಭಟಿಸುತ್ತೇವೆ ಎಂದರು. ಜೊತೆಗೆ ಭಾರತ ರಾಷ್ಟ್ರ ನಿರ್ಮಾಣವಾಗಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಿಂದ. ಧರ್ಮದ ಆಧಾರದ ಮೇಲೆ ಪೌರತ್ವದ ನಿರ್ಧಾರ ಮಾಡುವುದು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತ ದೇಶವು ಸಾಕಷ್ಟು ಸಮಸ್ಯೆಗಳಿಂದ ನರಳುತ್ತಿದೆ, ರೈತರ ಭೂಮಿಗಳನ್ನು ಕಿತ್ತುಕೊಂಡು ಸರಿಯಾದ ರೀತಿಯಲ್ಲಿ ಪರಿಹಾರ ನೀಡುತ್ತಿಲ್ಲ. ಕಾರ್ಮಿಕರು ಬೀದಿ ಪಾಲಾಗುತ್ತಿದ್ದಾರೆ. ಯುವಕರು ನಿರುದ್ಯೋಗಿಗಳಾಗುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು. ಜನವರಿ 2ರಂದು ನರೇಂದ್ರ ಮೋದಿಯವರು ತುಮಕೂರಿಗೆ ಬಂದು ರೈತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ, ಅವರಿಗೆ ರೈತರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇದೆಯೇ ಎಂದು ಪ್ರಶ್ನಿಸಿದರು.