ತುಮಕೂರು: ಜಿಂಕೆ ಬೇಟೆಯಾಡಲು ಬಂದಿದ್ದ ಆರು ಆರೋಪಿಗಳನ್ನು ಪಟ್ಟನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಜಿಂಕೆ ಬೇಟೆಯಾಡಲು ಬಂದಿದ್ದ ಆರು ಮಂದಿ ಬಂಧನ - ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆ
ಜಿಂಕೆ ಬೇಟೆಯಾಡಲು ಬಂದಿದ್ದ ಆರು ಮಂದಿ ಆರೋಪಿಗಳನ್ನು ಪಟ್ಟನಾಯಕನಹಳ್ಳಿ ಪೊಲೀಸರು ಬಂಧಿಸಿದ್ದು, ಒಂದು ಬಂದೂಕು ಹಾಗೂ ಎರಡು ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.
ಗುಬ್ಬಿ ನಗರದ ಮಾರುತಿ ಹೋಟೆಲ್ ಮಾಲೀಕ ನವೀನ್, ರೆಹಾನ್, ಶುಜಾತ್, ಕಿರಣ, ಶ್ರೀಧರ್, ರಾಜೀವ್ ಬಂಧಿತ ಆರೋಪಿಗಳು. ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಪೂಜಾರಮುದ್ದನಹಳ್ಳಿ ಸಮೀಪ ಬಂದೂಕು ಹಿಡಿದು 6 ಮಂದಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋದ ಪಟ್ಟನಾಯಕನಹಳ್ಳಿ ಪೊಲೀಸರು, ಆರು ಮಂದಿ ಆರೋಪಿಗಳನ್ನು ಠಾಣೆಗೆ ಕರೆದುಕೊಂಡು ಬಂದು ಸುದೀರ್ಘ ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ವೇಳೆ ಜಿಂಕೆ ಬೇಟೆಯಾಡಲು ಬಂದಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದು, ಬಂಧಿತರಿಂದ ಒಂದು ಬಂದೂಕು ಹಾಗೂ ಎರಡು ಕಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.