ತುಮಕೂರು:ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ರಂಗೇರಿದ್ದು ನೆರೆಯ ಆಂಧ್ರಪ್ರದೇಶದ ರಾಜಕೀಯ ಮುಖಂಡರನ್ನು ಕೂಡ ಸಂಪರ್ಕಿಸಿ ಗೆಲುವಿನ ಮುನ್ನುಡಿ ಬರೆಯಲು ಪಕ್ಷಗಳ ಮುಖಂಡರು ಮುಂದಾಗಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಶಿರಾ ವಿಧಾನಸಭಾ ಕ್ಷೇತ್ರವು ಆಂಧ್ರಪ್ರದೇಶದ ಮಡಕ್ಶಿರಾ ಪಟ್ಟಣಕ್ಕೆ ಹೊಂದಿಕೊಂಡಂತೆ ಇದ್ದು, ಕ್ಷೇತ್ರದಲ್ಲಿರುವ ಯಾದವ ಸಮುದಾಯದ ಮತಗಳನ್ನು ಸೆಳೆಯಲು ಆಂಧ್ರಪ್ರದೇಶದಲ್ಲಿರೋ ಮುಖಂಡರನ್ನು ಎಡತಾಕುತ್ತಿದ್ದಾರೆ. ಆ ಮೂಲಕ ಯಾದವರ ಮತ ಸೆಳೆಯಲು ಕಸರತ್ತು ಮಾಡಿದ್ದಾರೆ.
ಮುಖ್ಯವಾಗಿ ಆಂಧ್ರಪ್ರದೇಶದ ಮಡಕ್ಶಿರಾ ತಾಲೂಕಿನ ನೀಲಕಂಠ ಪುರದಲ್ಲಿರುವ ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ರಘುವೀರ ರೆಡ್ಡಿ ಅವರೊಂದಿಗೆ ಮಾತುಕತೆ ನಡೆಸುತ್ತಿರುವ, ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ಯಾದವ ಸಮುದಾಯ ತಮ್ಮ ಪಕ್ಷದ ಅಭ್ಯರ್ಥಿಗೆ ಬೆಂಬಲಿಸುವಂತೆ ಕೋರುತ್ತಿದ್ದಾರೆ. ಅಕ್ಟೋಬರ್ 16ರಂದು ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್ ಗೌಡ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಆಗಮಿಸಿದ್ದ ಡಿಸಿಎಂ ಡಾ. ಅಶ್ವತ್ಥನಾರಾಯಣ್ ರಘುವೀರ ರೆಡ್ಡಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.
ರಾಜ್ಯದ ಗಡಿ ಮೀರಿ ನಡೆಯುತ್ತಿದೆ ರಾಜಕೀಯ ರಣತಂತ್ರ ಬಿಜೆಪಿ ಮುಖಂಡರ ಈ ಭೇಟಿ ಬೆನ್ನಲ್ಲೇ ಕಾಂಗ್ರೆಸ್ ಮುಖಂಡರು ಸಹ ರಘುವೀರ ರೆಡ್ಡಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ರಾಜೇಂದ್ರ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರು ರೆಡ್ಡಿ ಅವರ ಮನೆಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ಅವರನ್ನು ಬೆಂಬಲಿಸುವಂತೆ ಅಲ್ಲದೆ ಯಾದವ ಸಮುದಾಯಕ್ಕೆ ಕರೆ ನೀಡುವಂತೆ ಮನವಿ ಮಾಡಿದ್ದಾರೆ.
ರಾಜ್ಯದ ಗಡಿ ಮೀರಿ ನಡೆಯುತ್ತಿದೆ ರಾಜಕೀಯ ರಣತಂತ್ರ ತುಮಕೂರು ಜಿಲ್ಲೆಯ ಗಡಿಭಾಗಕ್ಕೆ ಹೊಂದಿಕೊಂಡಿರುವ ಆಂಧ್ರಪ್ರದೇಶದಲ್ಲಿ ಸಕ್ರಿಯವಾಗಿರುವ ರಘುವೀರ ರೆಡ್ಡಿ, ಯಾದವ ಸಮುದಾಯದಲ್ಲಿ ಪ್ರಭಾವಿ ನಾಯಕರೆನಿಸಿಕೊಂಡಿದ್ದಾರೆ. ಅಲ್ಲದೆ ರಾಜ್ಯದ ಚಿತ್ರದುರ್ಗ, ಶಿರಾ, ಮಧುಗಿರಿ ಭಾಗದಲ್ಲಿ ತಮ್ಮದೇ ಆದ ಸಾಕಷ್ಟು ರಾಜಕೀಯ ಪ್ರಭುತ್ವ ಹೊಂದಿದ್ದಾರೆ.