ತುಮಕೂರು: ಜಿಲ್ಲೆಯಲ್ಲಿ ತ್ರಿವಿಧ ದಾಸೋಹಕ್ಕೆ ಮಾತ್ರ ಸೀಮಿತವಾಗಿರದ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಸಾರ್ವಜನಿಕರ ಧಾರ್ಮಿಕ ಆಚರಣೆಗಳಿಗೂ ಸಾಥ್ ನೀಡುತ್ತಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ ತುಮಕೂರಿನ ವಿನಾಯಕ ನಗರದಲ್ಲಿ ಪ್ರತೀ ವರ್ಷ ಪ್ರತಿಷ್ಠಾಪಿಸಲಾಗುವ ಗಣೇಶ ಮೂರ್ತಿ ಸಾಕ್ಷಿಯಾಗಿದೆ. ಆದರೆ ಈ ಬಾರಿ ಕೊರೊನಾ ಸೋಂಕು ಹರಡುವಿಕೆ ಭೀತಿಯಿಂದಲೇ ಅತಿ ಸರಳವಾಗಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.
ಕೋವಿಡ್ ಭೀತಿ: ಸಿದ್ದಗಂಗಾ ಶ್ರೀಯಿಂದ ಚಾಲನೆ ಪಡೆದಿದ್ದ ಈ ಗಣೇಶೋತ್ಸವ 6 ದಿನ ಮಾತ್ರ - ಸಿದ್ದಗಂಗಾ ಶ್ರೀ
ಕೊರೊನಾ ಸೋಂಕು ಹರಡುವ ಭೀತಿಯಿಂದ ಸಿದ್ದಗಂಗಾ ಶ್ರೀಯಿಂದ ಚಾಲನೆ ಪಡೆದಿದ್ದ ತುಮಕೂರಿನ ಗಣೇಶೋತ್ಸವನ್ನು ಸರ್ಕಾರದ ಅನೇಕ ನಿಯಮಾವಳಿಗಳ ಪ್ರಕಾರ ಸರಳವಾಗಿ ಆಚರಿಸಲಾಗುತ್ತಿದೆ.
1972 ರಲ್ಲಿ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರು ತುಮಕೂರು ನಗರದ ಪ್ರಸಿದ್ಧ ಗಣೇಶೋತ್ಸವಕ್ಕೆ ಚಾಲನೆ ನೀಡಿದ್ದರು. ಅಂದಿನಿಂದ ಇಂದಿನವರೆಗೂ ಈ ಗಣೇಶೋತ್ಸವ ಕಾರ್ಯಕ್ರಮ ನಡೆದುಕೊಂಡು ಬಂದಿತ್ತು. ಆದರೆ, ಈ ಬಾರಿ ಕೊರೊನಾ ಸೋಂಕಿನ ಭೀತಿ ನಡುವೆ ಸರ್ಕಾರದ ಅನೇಕ ನಿಯಮಾವಳಿಗಳ ಪ್ರಕಾರ ಗಣೇಶೋತ್ಸವ ಆಚರಿಸಲಾಗುತ್ತಿದೆ. ಸುಮಾರು 5 ಅಡಿ ಎತ್ತರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ಕೇವಲ 6 ದಿನಗಳಿಗೆ ಮಾತ್ರ ಸೀಮಿತವಾಗುವಂತೆ ಗಣೇಶೋತ್ಸವ ಮಾಡಲು ನಿರ್ಧರಿಸಲಾಗಿದೆ. ಅಲ್ಲದೇ ಅದ್ಧೂರಿ ಮೆರವಣಿಗೆಯೊಂದಿಗೆ ಗಣೇಶ ಮೂರ್ತಿಯನ್ನು ಕೆರೆಯಲ್ಲಿ ನಿಮಜ್ಜನ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಗಣಪತಿ ಪೆಂಡಾಲ್ ಆವರಣದಲ್ಲಿಯೇ ಮೂರ್ತಿಯನ್ನು ನಿಮಜ್ಜನ ಮಾಡಲು ಮಂಡಳಿಯು ನಿರ್ಧರಿಸಿದೆ. ಇದು ತುಮಕೂರಿನ ಗಣೇಶನ ಭಕ್ತರಿಗೆ ನಿರಾಸೆ ಮೂಡಿಸಿದೆ.
ಪ್ರತೀ ವರ್ಷ ಗಣೇಶೋತ್ಸವದ ವೇಳೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. ಆದರೆ ಈ ಬಾರಿ ಎಲ್ಲದಕ್ಕೂ ಬ್ರೇಕ್ ಹಾಕಲಾಗಿದೆ. ಕೇವಲ 6 ದಿನಗಳು ಮಾತ್ರ ನಿತ್ಯ ಪೂಜೆ, ಮಹಾಮಂಗಳಾರತಿ ನೆರವೇರಿಸಲಾಗುತ್ತದೆ.