ತುಮಕೂರು: ಕೇಂದ್ರ ಸರ್ಕಾರ ವೈದ್ಯಕೀಯ ಕಾಲೇಜು ಪ್ರಾರಂಭ ಮಾಡಲು ನಿಯಮ ಮತ್ತು ನಿಬಂಧನೆಗಳನ್ನು ಪುರಸ್ಕರಿಸಿರುವುದರಿಂದ 2022-23ನೇ ಶೈಕ್ಷಣಿಕ ವರ್ಷದಿಂದ ತುಮಕೂರಿನಲ್ಲಿ ಸಿದ್ದಗಂಗಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯನ್ನು ಆರಂಭಿಸಲು ನಿರ್ಧರಿಸಲಾಗಿದೆ ಎಂದು ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ.
ಈಗಾಗಲೇ ಕೇಂದ್ರ ತಂಡವು ಸಂಸ್ಥೆಗೆ ಭೇಟಿ ನೀಡಿ ಸಂಸ್ಥೆಯಲ್ಲಿರುವ ಮೂಲಸೌಕರ್ಯ ಮತ್ತು ಅಧ್ಯಾಪಕ ವೃಂದಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಸಂಸ್ಥೆಯು ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಅರ್ಹವಾಗಿದೆ ಎಂದು ಶಿಫಾರಸು ಮಾಡಿದೆ. ಇದರ ಆಧಾರದ ಮೇಲೆ ರಾಷ್ಟ್ರೀಯ ವೈದ್ಯಕೀಯ ಆಯೋಗದಿಂದ ಮೌಲ್ಯಮಾಪಕರು ಸಂಸ್ಥೆಗೆ ಅನಿರೀಕ್ಷಿತ ಭೇಟಿ ನೀಡಿ ಮೌಲ್ಯಮಾಪನ ಮಾಡಿದ್ದರು. ಹೀಗಾಗಿ, ಪ್ರಸ್ತುತ ಶೈಕ್ಷಣಿಕ ವರ್ಷದಿಂದ 150 ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ ಎಂದರು.