ತುಮಕೂರು:ವಿದ್ಯುತ್ ಸ್ಪರ್ಶದಿಂದ ಗಂಭೀರವಾಗಿ ಗಾಯಗೊಂಡ ನಾಲ್ವರು ಆಸ್ಪತ್ರೆಗೆ ದಾಖಲಾಗಿದ್ದು, ನೂರಾರು ಮನೆಗಳ ವಿದ್ಯುತ್ ಉಪಕರಣಗಳು ಸುಟ್ಟು ಭಸ್ಮವಾಗಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಚಿಲುಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿನ 11 ಕೆವಿ ವಿದ್ಯುತ್ ಸಾಮರ್ಥ್ಯದ ತಂತಿ ತುಂಡಾದ ಪರಿಣಾಮ ಅವಘಡ ಸಂಭವಿಸಿದೆ.
ಗ್ರಾಮದ 70 ಮನೆಗಳಲ್ಲಿನ ವಿದ್ಯುತ್ ಉಪಕರಣಗಳು ಭಸ್ಮವಾಗಿದ್ದು, ನೂರಾರು ಮನೆಗಳ ವೈರಿಂಗ್ ಸೇರಿದಂತೆ ಗೃಹಪಯೋಗಿ ವಸ್ತುಗಳು, ವಿದ್ಯುತ್ ಮೀಟರ್ಗಳು ಸುಟ್ಟು ಭಸ್ಮವಾಗಿವೆ. ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಗೃಹಪಯೋಗಿ ವಸ್ತುಗಳು ಸುಟ್ಟು ಕರಕಲಾಗಿವೆ. ಈ ನಡುವೆ ಒಂದೇ ಕುಟುಂಬದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಾಯಿ ಶಾರದಮ್ಮ (55), ಮಗ ಮಂಜುನಾಥ್ (35), ಸೊಸೆ ವರಲಕ್ಷ್ಮಿ (30), ಮೊಮ್ಮಗ ದರ್ಶನ್ (12 )ವಿದ್ಯುತ್ ಶಾಕ್ಗೆ ತುತ್ತಾಗಿದ್ದಾರೆ.
ಪ್ರಾಣಾಪಾಯದಿಂದ ಪಾರಾಗಿರುವ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವಘಡ ಸಂಭವಿಸಿದ್ದ ಸ್ಥಳಕ್ಕೆ ಮದುಗಿರಿ ಡಿವೈಎಸ್ಪಿ, ಕೊರಟಗೆರೆ ತಹಶೀಲ್ದಾರ್, ಬೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿದ್ಯುತ್ ತಂತಿ ದುರಸ್ತಿಗೆ ಕ್ರಮ ಕೈಗೊಂಡಿದ್ದಾರೆ. ಸುಟ್ಟು ಕರಕಲಾದ ಗೃಹಪಯೋಗಿ ವಸ್ತುಗಳಿಗೆ ಶೀಘ್ರ ಪರಿಹಾರವನ್ನೂ ಕೊಡುವುದಾಗಿ ಬೆಸ್ಕಾಂ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ ನಾಲ್ವರ ಆರೋಗ್ಯ ವಿಚಾರಿಸಿದ ತಹಶೀಲ್ದಾರ್ ಮುನಿಶಾಮಿ ರೆಡ್ಡಿ ಸೂಕ್ತ ಹಾಗೂ ಹೆಚ್ಚಿನ ಚಿಕಿತ್ಸೆಗೆ ಭರವಸೆ ನೀಡಿದ್ದಾರೆ.