ತುಮಕೂರು:ಮಕ್ಕಳು ಶಾಲೆಗೆ ಹೋಗ್ತಾರೆ. ಆದ್ರೆ ಅವರಿಗೆ ಶೂ, ಸಾಕ್ಸ್ ಕೊಡೋಕೆ ಸರ್ಕಾರಕ್ಕೆ ಇನ್ನೂ ಆಗಿಲ್ಲ. ಯುನಿಫಾರ್ಮನ್ನೂ ಕೊಡೋಕೆ ಆಗಿಲ್ಲ. ಏನಾಗಿದೆ ಸರ್ಕಾರ, ಏನು ದಿವಾಳಿ ಆಗಿದೆಯಾ ಎಂದು ಮಾಜಿ ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್ ಪ್ರಶ್ನಿಸಿದ್ದಾರೆ. ಕೊರಟಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುಮ್ನೆ ಅವರ ವಿರುದ್ಧ ಇವರು ಮಾತನಾಡೋದು, ನಾಲಿಗೆ ಕತ್ತರಿಸ್ತಿನಿ ಅಂತ ಒಬ್ರು ಅಂದ್ರೆ. ಇನ್ನೊಬ್ರು ನಾನು ಕಾಲು ಕತ್ತರಿಸ್ತಿನಿ ಅನ್ನೋದು. ಈ ತರ ಸಾರ್ವಜನಿಕರ ಬದುಕು ಇಷ್ಟು ಕೀಳುಮಟ್ಟಕ್ಕೆ ಹೋಗಬಾರದು ಎಂದು ಆಕ್ಷೇಪಿಸಿದರು.
ಹೈಕೋರ್ಟ್ ಜಸ್ಟಿಸ್ನವರು ಹೇಳ್ತಾರೆ. ನಿಮಗೆ ನಾಚಿಕೆ ಆಗಲ್ವಾ.. ಮಕ್ಕಳಿಗೆ ಶೂ, ಸಮವಸ್ತ್ರ ಕೊಡಲಿಲ್ಲ ಅಂತ, ಇದನ್ನ ನಾನು ಮುಖ್ಯಮಂತ್ರಿಗಳಿಗೆ ಗಂಭೀರವಾಗಿ ಆರೋಪ ಮಾಡ್ತಿನಿ. ತಕ್ಷಣ ಕ್ರಮ ತಗೋಬೇಕು.
ಯಾರು ಸಂಬಂಧಪಟ್ಟವರು ಇದ್ದಾರೋ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ನಾಗೇಶ ಮೊದಲ ಬಾರಿಗೆ ಮಂತ್ರಿ: ನಮ್ಮ ಜಿಲ್ಲೆಯವರೇ ಶಿಕ್ಷಣ ಇಲಾಖೆಯ ಸಚಿವರಿದ್ದಾರೆ. ನಾಗೇಶ್ ಅವರು ಮೊದಲ ಬಾರಿಗೆ ಮಂತ್ರಿಗಳಾಗಿದ್ದಾರೆ. ನಾನು ಅವರಿಗೆ ಒತ್ತಾಯ ಮಾಡ್ತಿನಿ. ಅವರ ಕಷ್ಟ ಏನಿದೆಯೋ ನನಗೆ ಗೊತ್ತಿಲ್ಲ. ಅದು ನಿಮ್ಮ ಜವಾಬ್ದಾರಿ. ಕೂಡಲೇ ಶಾಲಾ ಮಕ್ಕಳಿಗೆ ಪುಸ್ತಕ, ಸಮವಸ್ತ್ರ, ಹಾಗೂ ಶೂ ಕೊಡ್ಬೇಕು ಎಂದು ಪರಮೇಶ್ವರ್ ಒತ್ತಾಯಿಸಿದ್ದಾರೆ.
ಲೋಕೋಪಯೋಗಿ ಇಲಾಖೆಯಲ್ಲಿ 6500 ಕೋಟಿ ಬಿಲ್ ಬಾಕಿಯಿದೆ. ನೀರಾವರಿ ಇಲಾಖೆಯಲ್ಲಿ 25 ಸಾವಿರ ಕೋಟಿ ಬಾಕಿಯಿದೆ. ಅವರು ರಿಪ್ಲೈ ಮಾಡ್ಬೇಕಲ್ವಾ. ಸಂಬಂಧಪಟ್ಟ ಸಚಿವರು ಮಾಡ್ಬೇಕು, ಇಲ್ಲ ಮುಖ್ಯಮಂತ್ರಿಗಳು ಮಾಡ್ಬೇಕು. ಮುಖ್ಯಮಂತ್ರಿಗಳೇ ಹಣಕಾಸಿನ ಸಚಿವರು ಯಾಕೆ ನೀವು ಹೇಳೋದಿಲ್ಲ ಎಂದು ಜಿ ಪರಮೇಶ್ವರ್ ಪ್ರಶ್ನಿಸಿದರು.
ಸರ್ಕಾರ ದಿವಾಳಿ ಆಗಿದೆ: ಯಾಕೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಣ ಬಾಕಿ ಉಳಿಸಿಕೊಂಡಿದ್ದೀರಾ. ಅದಕ್ಕೆ ನಿಮ್ಮ ಹತ್ರ ದುಡ್ಡಿಲ್ಲ. ಸರ್ಕಾರ ದಿವಾಳಿ ಆಗಿದೆ. ನಿಮ್ಮ ಬಳಿ ದುಡ್ಡಿಲ್ಲ ಅಂತ ನೇರವಾಗಿ ಒಪ್ಪಿಕೊಳ್ಳಿ. ಇವತ್ತು ಬಜೆಟ್ ಕೊಡ್ತಿದ್ದೀರಾ. ಇದಕ್ಕೆಲ್ಲ ಉತ್ತರ ಸದನದಲ್ಲಿ ನೀವು ಹೇಳ್ಬೇಕು ಎಂದು ಮಾಜಿ ಡಿಸಿಎಂ ಒತ್ತಾಯಿಸಿದರು.