ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಸನ್ನು ಗುಡಿಸಿ ಹಾಕಲು ಕಾಂಗ್ರೆಸ್ಸಿಗರೇ ನಮಗೆ ಸಹಕಾರ ನೀಡುತ್ತಿದ್ದಾರೆ. ಈ ಗುಟ್ಟನ್ನು ಯಾರಿಗೂ ಹೇಳಬೇಡಿ ಎಂದು ಸಚಿವ ಸಿ.ಟಿ. ರವಿ ಬಹಿರಂಗ ಸಭೆಯಲ್ಲಿ ಹೇಳಿದ್ದು ಚರ್ಚೆಗೆ ಗ್ರಾಸವಾಗಿದೆ.
ಶಿರಾದಲ್ಲಿ ಕಾಂಗ್ರೆಸ್ಸಿಗರೇ ಕಾಂಗ್ರೆಸ್ ಪಕ್ಷವನ್ನು ಗುಡಿಸಿ ಹಾಕ್ತಾರೆ: ಸಚಿವ ಸಿ.ಟಿ.ರವಿ - ಸಚಿವ ಸಿ.ಟಿ. ರವಿ ಹೇಳಿಕೆ
ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವಂತೆ ಸಚಿವ ಸಿ.ಟಿ ರವಿ ಮತದಾರರಲ್ಲಿ ಮನವಿ ಮಾಡಿದರು.
ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಪರ ಪ್ರಚಾರ ಸಭೆಗೆ ಆಗಮಿಸಿದ್ದ ಅವರು ಕಳ್ಳಂಬೆಳ್ಳ ಹೋಬಳಿಯ ದೊಡ್ಡ ಆಲದ ಮರ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಮಾತನಾಡುತ್ತಾ, 2013ರಲ್ಲಿ ಕೊರಟಗೆರೆ ವಿಧಾನಸಭಾ ಚುನಾವಣೆಯಲ್ಲಿ ಜಿ. ಪರಮೇಶ್ವರ್ ಅವರನ್ನು ಸೋಲಿಸಿದ್ದು ಯಾರು ಅನ್ನೋದು ಬಹಿರಂಗವಾಗಲಿ. ಅದೇ ರೀತಿ ಕಾಂಗ್ರೆಸ್ ಮುಖಂಡ ಕೆ. ಎನ್. ರಾಜಣ್ಣ ಹೊರಗೆ ಕಾಂಗ್ರೆಸ್ ಪರವಾಗಿ ಭಾಷಣ ಮಾಡಬಹುದು. ಆದರೆ ಒಳಗೆ ಯಾರಿಗೆ ಪ್ರಚಾರ ಮಾಡಬೇಕೆಂದು ಹೇಳುತ್ತಾರೆ ಎಂದು ಒಗಟಾಗಿ ಹೇಳಿದರು.
ಅಭಿವೃದ್ಧಿ ಎಂಬ ಹಾಲು ಕರೆಯಲು ಬಿಜೆಪಿ ಎಂಬ ಕರುವನ್ನು ಬಿಡಬೇಕಿದೆ. ರಾಜ್ಯದಲ್ಲೂ ಹಾಗು ಕೇಂದ್ರದಲ್ಲಿಯೂ ಬಿಜೆಪಿ ಸರ್ಕಾರವಿದೆ. ಇದು ರೈತರಿಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಎಂಬ ಕರುವನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.