ತುಮಕೂರು: ಶಿರಾ ಉಪಚುನಾವಣೆಯಲ್ಲಿ ಅನೇಕ ಸಣ್ಣ - ಸಣ್ಣ ಸಮುದಾಯಗಳ ಮತಗಳ ಮೇಲೆ ಕಣ್ಣಿಟ್ಟಿರುವ ಪ್ರಮುಖ ಪಕ್ಷಗಳು ಅಲ್ಪಸಂಖ್ಯಾತ ಸಮುದಾಯದ ಮತಗಳನ್ನು ಬಹಿರಂಗವಾಗಿ ಕೇಳಲು ಹಿಂದೇಟು ಹಾಕುತ್ತಿವೆ. ಆದರೆ, ಅಲ್ಪಸಂಖ್ಯಾತ ಸಮುದಾಯದ ಕಾಂಗ್ರೆಸ್ ಮುಖಂಡರು ಮಾತ್ರ ಅಲ್ಪಸಂಖ್ಯಾತರ ಮನೆಗಳಿಗೆ ತೆರಳಿ ತೆರೆಮರೆಯಲ್ಲಿ ಮತ ಯಾಚಿಸುತ್ತಿದ್ದಾರೆ.
ಶಿರಾ ಉಪ ಕದನ: ಅಲ್ಪಸಂಖ್ಯಾತರ ಮನವೊಲಿಸಲು ತೆರೆಮರೆ ಕಸರತ್ತು
ಈವರೆಗೆ ಕಾಂಗ್ರೆಸ್ ಪಕ್ಷ ಹಾಗೂ ಜೆಡಿಎಸ್ ಅಲ್ಪಸಂಖ್ಯಾತ ಸಮುದಾಯದ ಮತಗಳನ್ನು ಬಹಿರಂಗವಾಗಿ ಓಲೈಕೆ ಮಾಡಲು ಹಿಂದೇಟು ಹಾಕಿವೆ. ಆದರೆ ಅಲ್ಪಸಂಖ್ಯಾತ ಸಮುದಾಯದ ಕಾಂಗ್ರೆಸ್ ಮುಖಂಡರು ಮಾತ್ರ ಅಲ್ಪಸಂಖ್ಯಾತರ ಮನೆಗಳಿಗೆ ತೆರಳಿ ತೆರೆಮರೆಯಲ್ಲಿ ಮತ ಯಾಚಿಸುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ತುಮಕೂರು ನಗರ ಮಾಜಿ ಶಾಸಕ ರಫೀಕ್ ಅಹಮದ್ ನೇತೃತ್ವದಲ್ಲಿ ಸ್ಥಳೀಯ ಕೆಲ ಕಾಂಗ್ರೆಸ್ ಮುಖಂಡರು ಶಿರಾ ನಗರದ ಕೆರೆ ಕಲ್ಹಟ್ಟಿ ಸುತ್ತಮುತ್ತಲ ಪ್ರದೇಶದಲ್ಲಿ ಇರುವಂತಹ ಅಲ್ಪಸಂಖ್ಯಾತ ಸಮುದಾಯದವರ ಬಳಿ ತೆರಳಿ ಮತ ಯಾಚಿಸುತ್ತಿದ್ದಾರೆ. ಅಲ್ಲದೇ ಜೆಡಿಎಸ್ಗೆ ಮತ ಹಾಕಿದರೆ ಅದು ಬಿಜೆಪಿಗೆ ಮತ ಚಲಾವಣೆ ಮಾಡಿದಂತೆ ಎಂದು ಅಲ್ಪಸಂಖ್ಯಾತರ ಬಳಿ ಹೇಳುತ್ತಿರುವುದು ಕಂಡು ಬರುತ್ತಿದೆ.
ಅಲ್ಲದೇ ಕಾಂಗ್ರೆಸ್ ಅಭ್ಯರ್ಥಿ ಟಿಬಿ ಜಯಚಂದ್ರ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿಯೂ ಕೂಡ ಪಕ್ಷದ ಮುಖಂಡರು ಬಹಿರಂಗವಾಗಿ ಅಲ್ಪಸಂಖ್ಯಾತರೊಂದಿಗೆ ಕಾಣಿಸಿಕೊಳ್ಳದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇನ್ನೊಂದೆಡೆ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶಗೌಡ ಈಗಾಗಲೇ, ಶಿರಾ ನಗರದಲ್ಲಿ ಧರ್ಮವೊದರ ಜನರ ಮೇಲೆ ಅಲ್ಪಸಂಖ್ಯಾತರಿಂದ ದೌರ್ಜನ್ಯ ನಡೆಯುತ್ತಿದೆ ಎಂಬ ಹೇಳಿಕೆಗಳನ್ನು ನೀಡಿದ್ದಾರೆ. ಅಲ್ಪಸಂಖ್ಯಾತರ ಮತಗಳನ್ನು ಬಹಿರಂಗವಾಗಿ ಓಲೈಕೆ ಮಾಡಿದರೆ ಅಲ್ಪಸಂಖ್ಯಾತರ ಹೊರತಾದ ಮತಗಳು ಸಾರಾಸಗಟಾಗಿ ಬಿಜೆಪಿಗೆ ಚಲಾವಣೆಯಾಗುವ ಭಯ ಕೂಡ ಕಾಂಗ್ರೆಸ್ ಹಾಗೂ ಜೆಡಿಎಸ್ನಲ್ಲಿ ಮನೆ ಮಾಡಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಹೀಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ತೆರೆಮರೆಯಲ್ಲಿಯೇ ಅಲ್ಪಸಂಖ್ಯಾತರ ಮತಗಳನ್ನು ಓಲೈಸಿಕೊಳ್ಳಲು ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ.