ತುಮಕೂರು:ನಗರದ ವಿವಿಧೆಡೆ ಇರುವ ಅವ್ಯವಸ್ಥೆಯ ಸಂಪೂರ್ಣ ಮಾಹಿತಿಯನ್ನು ಡ್ರೋನ್ ಕ್ಯಾಮೆರಾ ಮೂಲಕ ಪಡೆದುಕೊಂಡ ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಾಲಿನಿ ರಜನೀಶ್ ಅಧಿಕಾರಿಗಳಿಗೆ ಖಡಕಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇಂದು ತುಮಕೂರು ಪಾಲಿಕೆ ಆವರಣದ ಸಭಾಂಗಣದಲ್ಲಿ ನಡೆದ ಸ್ಮಾರ್ಟ್ ಸಿಟಿ ಅಭಿವೃದ್ಧಿ ಮತ್ತು ಪಾಲಿಕೆಯ ಅಭಿವೃದ್ಧಿ ಕಾರ್ಯಕ್ರಮಗಳ ಸಮೀಕ್ಷೆ ನಡೆಸಿದ ಅವರು, ಡ್ರೋನ್ ಕ್ಯಾಮೆರಾ ಮೂಲಕ ತುಮಕೂರು ನಗರದ ಸಂಪೂರ್ಣ ಮಾಹಿತಿಯನ್ನು ಬೃಹತ್ ಪರದೆಯ ಮೇಲೆ ವೀಕ್ಷಿಸಿದರು.
ಡ್ರೋನ್ ಮೂಲಕ ನಗರದ ಅವ್ಯವಸ್ಥೆ ವೀಕ್ಷಿಸಿದ ಶಾಲಿನಿ ರಜನೀಶ್.. ಕ್ಯಾಸಂದ್ರ ಬಳಿಯ ಕೊಳಚೆ ಪ್ರದೇಶವನ್ನು ಗುರುತಿಸಿದ ಶಾಲಿನಿ ರಜನೀಶ್ ಇದನ್ನು ಸ್ವಚ್ಛಗೊಳಿಸುತ್ತಿರುವ ಕುರಿತು ಪಾಲಿಕೆ ಅಧಿಕಾರಿಗಳಿಗೆ ಏರುದನಿಯಲ್ಲಿ ಪ್ರಶ್ನಿಸಿದರು. ಈ ಕೊಳಚೆ ಪ್ರದೇಶದ ಬಗ್ಗೆ ಯಾವುದೇ ಮಾಹಿತಿ ಇಲ್ಲದಿರುವುದು, ಒಂದು ರೀತಿ ಪಾಲಿಕೆ ಅಧಿಕಾರಿಗಳನ್ನೇ ಕಕ್ಕಾಬಿಕ್ಕಿ ಆಗುವಂತೆ ಮಾಡಿತ್ತು.
ಇದಲ್ಲದೆ ಸಭೆಗೆ ಬರುವ ಮುನ್ನ ತುಮಕೂರು ನಗರದ ವಿವಿಧೆಡೆ ಖುದ್ದು ಪರಿಶೀಲನೆ ನಡೆಸಿದ್ದ ಶಾಲಿನಿ ರಜನೀಶ್,ನಗರದ ವಿವಿಧೆಡೆ ರಸ್ತೆ ಬದಿಯಲ್ಲಿ ಬೇಕಾ ಬಿಟ್ಟಿಯಾಗಿ ಮಣ್ಣು,ಕಸ ಹಾಕಿರುವ ಫೋಟೋಗಳನ್ನು ತಂದು ಸಭೆಯಲ್ಲಿ ಪ್ರದರ್ಶಿಸಿದರು. ಈ ಅವ್ಯವಸ್ಥೆ ಬಗ್ಗೆಯೇ ಅಧಿಕಾರಿಗಳಿಗೆ ಯಾವುದೇ ಮಾಹಿತಿ ಇಲ್ಲದೆ ಇರುವುದನ್ನು ಕೇಳಿದ ಶಾಲಿನಿ ರಜನೀಶ್ ಕೆಂಡಾಮಂಡಲರಾದ್ರು. ಸಭೆಯಲ್ಲಿ ಪಾಲಿಕೆ ಆಯುಕ್ತ ಭೂ ಬಾಲನ್, ಶಾಸಕ ಜ್ಯೋತಿ ಗಣೇಶ್, ಪಾಲಿಕೆ ಮೇಯರ್ ಲಲಿತಾ ರವೀಶ್ ಹಾಜರಿದ್ದರು.