ತುಮಕೂರು: ಕಳೆದ ಬಾರಿ ಪಟಾಕಿ ಸಿಡಿತದಿಂದ ಅನಾಹುತ ಸಂಭವಿಸಿದ್ದರೂ, ತಿಪಟೂರಿನ ಶ್ರೀ ಸತ್ಯ ಗಣಪತಿ ಸೇವಾ ಟ್ರಸ್ಟ್ ಎಚ್ಚೆತ್ತುಕೊಂಡಿಲ್ಲ ಎಂದು ಜಿಲ್ಲಾ ಪಂಚಾಯತ್ ಸದಸ್ಯ ರಕ್ಷಿತ್ ಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಿಪಟೂರಿನಲ್ಲಿ ಕಳೆದ ವರ್ಷ ನಡೆದ ಸತ್ಯ ಗಣಪತಿ ವಿಸರ್ಜನಾ ಮಹೋತ್ಸವದಲ್ಲಿ ತುರುವೇಕೆರೆ ತಾಲೂಕಿನ ಹಡವನಹಳ್ಳಿಯ 23 ವರ್ಷದ ಸಿತಾರ ಎಂಬ ಯುವತಿ ಪಟಾಕಿ ಸಿಡಿದು ಮೃತಪಟ್ಟಿದ್ದಳು, ಇಷ್ಟಾದರೂ ಸಮಿತಿ ಎಚ್ಚೆತ್ತುಕೊಳ್ಳದೇ ಮತ್ತೆ ನವಂಬರ್ 23, 24 ರಂದು ಪಟಾಕಿ ಪ್ರದರ್ಶನ ಆಯೋಜಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಳೆದ ಬಾರಿ ನಡೆದ ಘಟನೆ ಅರಿತು ಸಮಿತಿಯು ಪಟಾಕಿ ಪ್ರದರ್ಶನ ಕೈಬಿಡುವ ನಿರೀಕ್ಷೆಯಿತ್ತು, ಆದರೆ ನಮ್ಮ ನಿರೀಕ್ಷೆ ವಿಫಲವಾಗಿದೆ. ಪಟಾಕಿ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದ ಘಟನೆ ಕಣ್ಣಾರೆ ಕಂಡರೂ ಟ್ರಸ್ಟ್ಗೆ ಬುದ್ಧಿ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಟಾಕಿ ಸಿಡಿಸುವುದಕ್ಕೆ ಅನುಮತಿ ನೀಡಬಾರದು ಎಂದು ಈಗಾಗಲೇ ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಾಗೂ ತಿಪಟೂರು ನಗರ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಲಾಗಿದೆ. ಇದನ್ನು ಮೀರಿ ಪಟಾಕಿ ಹೊಡೆಯಲು ಮುಂದಾದರೆ ಪಟಾಕಿ ಸಿಡಿಸುವ ಸ್ಥಳದಲ್ಲಿ ನೂರಕ್ಕೂ ಹೆಚ್ಚು ಜನ ನಿಂತುಕೊಂಡು ಪ್ರತಿಭಟನೆ ಮಾಡುತ್ತೇವೆ. ಏನಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ಟ್ರಸ್ಟ್ ಮತ್ತು ಜಿಲ್ಲಾಡಳಿತ ನೇರ ಹೊಣೆ ಎಂದರು.