ತುಮಕೂರು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ತುಮಕೂರು:ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಎಟಿಎಂಗಳಿಗೆ ಹಣ ಭರ್ತಿ ಮಾಡಲು ತೆಗೆದುಕೊಂಡು ಹೋಗುವಂತಹ ವಾಹನಗಳನ್ನು ಕೂಡ ಪರಿಶೀಲನೆ ನಡೆಸುವುದು ಕಡ್ಡಾಯವಾಗಿರುತ್ತದೆ. ಹೀಗಾಗಿ ಹಣ ಸಾಗಿಸುವಂತಹ ವಾಹನಗಳ ಕುರಿತು ಪರಿಶೀಲಿಸಲು ಪ್ರತ್ಯೇಕ ಆ್ಯಪ್ ಅನ್ನು ಚುನಾವಣಾ ಆಯೋಗ ಬಳಸಿಕೊಳ್ಳುತ್ತಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ಆಗಿರುವ ವೈ ಎಸ್ ಪಾಟೀಲ್ ತಿಳಿಸಿದ್ದಾರೆ.
ತುಮಕೂರು ನಗರದಲ್ಲಿ ಇಂದು ಮಾಧ್ಯಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಈ ಆ್ಯಪ್ ಮೂಲಕ ಹಣ ಸಾಗಿಸುವಂತಹ ವಾಹನಗಳಲ್ಲಿನ ಹಣ ಅಧಿಕೃತವಾಗಿರುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುವುದು. ಅಲ್ಲದೆ ಹಣ ಸಾಗಿಸುವ ಚಾಲಕ ಹಾಗೂ ಅಲ್ಲಿರುವಂತಹ ಹಣದ ಕುರಿತು ಕೂಡ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ. ಇದರಿಂದಾಗಿ ಎಟಿಎಂಗಳಿಗೆ ಹಣ ಭರ್ತಿ ಮಾಡಲು ಹೋಗುವ ವಾಹನಗಳಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನೀತಿ ಸಂಹಿತೆ ಜಾರಿ ಬೆನ್ನಲ್ಲೇ ಜಿಲ್ಲೆಯಾದ್ಯಂತ ಕಟ್ಟೆಚ್ಚರ: ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿಗೂ ಚುನಾವಣಾಧಿಕಾರಿಗಳ ನೇಮಕ ಮಾಡಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 2,638 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. 507 ಅತಿಸೂಕ್ಷ್ಮ ಮತ್ತು ಸೂಕ್ಷ್ಮ ಮತಗಟ್ಟೆಗಳು, 55 ಮಹಿಳಾ ಮತಗಟ್ಟೆಗಳು, 11 ವಿಕಲಚೇತನ ಮತಗಟ್ಟೆಗಳು, 22 ಯುವ ಅಧಿಕಾರಿಗಳ ಮತಗಟ್ಟೆಗಳು ಎಂದು ಜಿಲ್ಲಾ ಚುನಾವಣಾಧಿಕಾರಿ ಅವರು ವಿವರಿಸಿದರು.
ತುಮಕೂರು ಜಿಲ್ಲೆಯಾದ್ಯಂತ 45 ನೀತಿ ಸಂಹಿತೆ ಜಾರಿಯ ಚೆಕ್ ಪೋಸ್ಟ್ ಸ್ಥಾಪನೆ ಹಾಗೂ 19 ನೋಡಲ್ ಆಫೀಸರ್ಸ್ ನೇಮಕ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 22,27,401 ಮತದಾರರಿದ್ದು, ಅದ್ರಲ್ಲಿ 11,11,221 ಪುರುಷ ಮತದಾರರು, 11,16,077 ಮಹಿಳಾ ಮತದಾರರಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿ 42,737 ಮಂದಿ ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ ಎಂದು ತಿಳಿಸಿದರು.
ಅಂಚೆ ಮತಪತ್ರಗಳ ಮೂಲಕ ವೋಟ್ ಮಾಡಲು ಅವಕಾಶ: 11 ವಿಧಾನಸಭಾ ಕ್ಷೇತ್ರಗಳಲ್ಲೂ ಕಂಟ್ರೋಲ್ ರೂಂ ಸ್ಥಾಪನೆ ಮಾಡಲಾಗಿದೆ. ಚುನಾವಣಾ ಕಾರ್ಯಕ್ಕೆ ಪಿಆರ್‌ಒ, ಎಪಿಆರ್‌ಒ, ಪಿಓ, ಮೈಕ್ರೋ ಅಬ್ಸರ್ವರ್ಸ್ ಸೇರಿ ಒಟ್ಟು 12,323 ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಜಿಲ್ಲೆಯಲ್ಲಿ 29,720 ವಿಕಲಚೇತನ ಮತದಾರರು, 80 ವರ್ಷಕ್ಕೂ ಮೇಲ್ಪಟ್ಟ 55,827 ಮತದಾರರಿದ್ದಾರೆ. ವಿಕಲಚೇತನ, 80 ವರ್ಷಕ್ಕೂ ಮೇಲ್ಪಟ್ಟ ಒಟ್ಟು 85,547 ಮತದಾರರಿಗೆ ಅಂಚೆ ಮತಪತ್ರ ಮೂಲಕ ವೋಟಿಂಗ್ ಮಾಡಲು ಅವಕಾಶ ಮಾಡಿಕೊಡಲಾಗಿದೆ ಎಂದರು.
ಆಯೋಗದ ಸೂಚನೆಯಂತೆ ಕಟ್ಟುನಿಟ್ಟಿನ ಕ್ರಮ: ಜಿಲ್ಲೆಯಾದ್ಯಂತ ಎಲ್ಲ ಗಡಿಭಾಗದಲ್ಲಿಯೂ ಸೇರಿದಂತೆ ಒಟ್ಟು 45 ಚೆಕ್ಪೋಸ್ಟ್ಗಳನ್ನು ಪೊಲೀಸ್ ಇಲಾಖೆ ಸಹಾಯದೊಂದಿಗೆ ತೆರೆಯಲಾಗುತ್ತಿದೆ. ಎಲ್ಲಿಯೂ ಕೂಡ ಯಾವುದೇ ಲೋಪವಾಗದಂತೆ ಚುನಾವಣಾ ಆಯೋಗದ ಸೂಚನೆಯಂತೆ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಹುಟ್ಟು 19 ನೋಡಲ್ ಅಧಿಕಾರಿಗಳನ್ನು ವಿವಿಧ ವಿಭಾಗಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಕರ್ನಾಟಕ ಚುನಾವಣೆಯಲ್ಲಿ ಸಂಪೂರ್ಣವಾಗಿ ಹೊಸ ಮತಯಂತ್ರಗಳ ಬಳಕೆ: ಮನೋಜ್ ಕುಮಾರ್ ಮೀನಾ