ತುಮಕೂರು: ಜಿಲ್ಲೆಯ ವಿವಿಧೆಡೆ ಕೊರೊನಾ ಸೋಂಕು ನಿಧಾನಗತಿಯಲ್ಲಿ ಏರಿಕೆಯಾಗುತ್ತಿದ್ದು, ಮೂರು ತಾಲೂಕು ಕೇಂದ್ರಗಳಲ್ಲಿ ಜನರು ಸ್ವಯಂ ಪ್ರೇರಿತರಾಗಿ ಸ್ಥಳೀಯ ವ್ಯವಸ್ಥೆಗೆ ತಕ್ಕಂತೆ ಲಾಕ್ಡೌನ್ ಮೊರೆ ಹೋಗಿದ್ದಾರೆ.
ಸೋಂಕು ನಿಯಂತ್ರಿಸುವ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲಾಡಳಿತ ಹಲವು ಮಾರ್ಗೋಪಾಯಗಳನ್ನು ಕೈಗೊಂಡಿದೆ. ಆದರೂ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಹೀಗಾಗಿ ಕುಣಿಗಲ್, ತಿಪಟೂರು ಹಾಗೂ ಕೊರಟಗೆರೆ ತಾಲೂಕುಗಳಲ್ಲಿ ಜನರು ವ್ಯಾಪಾ ವಹಿವಾಟು ನಡೆಸುವುದನ್ನು ದಿನದ ಕೆಲವೇ ಗಂಟೆಗಳಿಗೆ ಸೀಮಿತಗೊಳಿಸಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 612ಕ್ಕೆ ಏರಿಕೆಯಾಗಿದೆ. ಹದಿನೆಂಟು ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಅದರಲ್ಲೂ ಕೊರಟಗೆರೆಯಲ್ಲಿ 36, ಕುಣಿಗಲ್ನಲ್ಲಿ 29, ತಿಪಟೂರಿನಲ್ಲಿ 24 ಪ್ರಕರಣಗಳು ಪತ್ತೆಯಾಗಿವೆ. ಕಳೆದ 10 ದಿನಗಳಿಂದ ದಿಢೀರನೆ ಏರಿಕೆಯಾದ ಸೋಂಕಿತರ ಸಂಖ್ಯೆಯಿಂದ ಬೆಚ್ಚಿಬಿದ್ದಿರುವ ತಾಲೂಕಿನ ಜನರು ಸೋಂಕು ನಿಯಂತ್ರಿಸಲು ಸ್ವಯಂ ಪ್ರೇರಿತರಾಗಿ ಲಾಕ್ಡೌನ್ ಮೊರೆ ಹೋಗಿದ್ದಾರೆ. ಸ್ಥಳೀಯ ವಿವಿಧ ಜನಪರ ಸಂಘಟನೆಗಳು, ವರ್ತಕರು ಸ್ವಯಂ ಪ್ರೇರಿತ ಲಾಕ್ಡೌನ್ಗೆ ಸಹಕಾರ ನೀಡುತ್ತಿದ್ದಾರೆ.
ತಿಪಟೂರು ಪಟ್ಟಣದಲ್ಲಿ ಚಿನ್ನ-ಬೆಳ್ಳಿ ಅಂಗಡಿ ಮಾಲೀಕರ ಸಂಘದಿಂದ ಸಂಜೆ 4 ಗಂಟೆವರೆಗೆ, ಹಾರ್ಡ್ವೇರ್ ಅಂಗಡಿ ಮಾಲೀಕರ ಸಂಘದಿಂದ ಮಧ್ಯಾಹ್ನ 2 ಗಂಟೆಯವರೆಗೆ, ಬಟ್ಟೆ ಅಂಗಡಿ ಮಾಲೀಕರ ಸಂಘದಿಂದ ಸಂಜೆ 5 ಗಂಟೆವರೆಗೆ ಮಾತ್ರ ವಹಿವಾಟು ನಡೆಯಲಿದೆ.