ತುಮಕೂರು: ವೈಯಕ್ತಿಕ ದ್ವೇಷದ ಹಿನ್ನೆಲೆ ರೌಡಿಶೀಟರ್ನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದಿರುವ ಘಟನೆ ತುಮಕೂರು ನಗರದಲ್ಲಿ ಶನಿವಾರ ರಾತ್ರಿ ನಡೆದಿದೆ. ಮಧುಗಿರಿ ತಾಲ್ಲೂಕು ಕೊಡಿಗೇನಹಳ್ಳಿ ಗ್ರಾಮದ ಮಾರುತಿ ಅಲಿಯಾಸ್ ಪೊಲಾರ್ಡ್ (34) ಕೊಲೆಯಾದ ರೌಡಿಶೀಟರ್.
ಶನಿವಾರ ಮಧ್ಯರಾತ್ರಿ ನಗರದ ಬಂಡಿಮನೆ ಕಲ್ಯಾಣ ಮಂಟಪದ ಬಳಿ ಮಾರುತಿ ಸ್ನೇಹಿತರ ಜೊತೆ ಮದ್ಯ ಸೇವಿಸಿ ಪಾರ್ಟಿ ಮಾಡುತ್ತಿದ್ದನು. ಈ ವೇಳೆ ನಾಲ್ಕೈದು ಮಂದಿ ದುಷ್ಕರ್ಮಿಗಳು ಮಾರುತಿ ಮೇಲೆ ಏಕಾಏಕಿ ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಿದ್ದರು. ಗಂಭೀರ ಗಾಯಗೊಂಡ ರೌಡಿಶೀಟರ್ ಮಾರುತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಮಾರುತಿ ತುಮಕೂರಿನ ಮಂಚಲಕುಪ್ಪೆ ಬಳಿ ಪತ್ನಿ ಜೊತೆ ವಾಸವಾಗಿದ್ದನು. ಅನೇಕ ವರ್ಷಗಳ ಹಿಂದೆ ನಡೆದಿದ್ದ ರೌಡಿ ಶೀಟರ್ ಹಟ್ಟಿ ಮಂಜನ ಕೊಲೆ ಕೇಸ್ ಸೇರಿದಂತೆ ಹಲವು ಕೇಸ್‌ಗಳಲ್ಲಿ ಮಾರುತಿ ಆರೋಪಿಯಾಗಿದ್ದನು. ರೌಡಿಶೀಟರ್ ಮಂಜುನಾಥ್ ಹತ್ಯೆಯ ಪ್ರತೀಕಾರ ತೀರಿಸಿಕೊಳ್ಳಲು ಮಾರುತಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎಂದು ಸಂಶಯಿಸಲಾಗಿದೆ. ಘಟನಾ ಸ್ಥಳಕ್ಕೆ ತುಮಕೂರು ಎಸ್‌ಪಿ ಅಶೋಕ್, ಎಎಸ್‌ಪಿ ಮರಿಯಪ್ಪ ಹಾಗೂ ಡಿವೈಎಸ್‌ಪಿ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗೆ ತಂಡವನ್ನು ರಚಿಸಲಾಗಿದೆ.
ಕಲಬುರಗಿ ಗ್ರಾಮಪಂಚಾಯತ್ ಅಧ್ಯಕ್ಷನ ಹತ್ಯೆ.. ಐವರ ಬಂಧನ: ಶಾಸಕ ಎಂವೈ ಪಾಟೀಲ್ ಅವರ ಆಪ್ತ ಮದರಾ (ಬಿ) ಗ್ರಾಮ ಪಂಚಾಯತಿ ಅಧ್ಯಕ್ಷ ಗೌಡಪ್ಪಗೌಡ ಪಾಟೀಲ್ ಬಿರಾದಾರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ದೇವಲಗಾಣಗಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಇದೇ ತಾಲೂಕಿನ ಸಿದನೂರ ಗ್ರಾಮದಲ್ಲಿ ನಡೆದಿದ್ದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ರೇವೂರ್ (ಬಿ) ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗ್ರಾ.ಪಂ ಅಧ್ಯಕ್ಷ ಗೌಡಪ್ಪಗೌಡ ಪಾಟೀಲ್ ಬಿರಾದಾರ ಕೊಲೆ ಪ್ರಕರಣ ಸಂಬಂಧ ಮದರಾ (ಬಿ) ಗ್ರಾಮದ ಗುರುಭೀಮ ಯಂಕಂಚಿ (57), ದತ್ತು ಯಂಕಂಚಿ(32), ನಿಂಗಣ್ಣ ಯಂಕಂಚಿ (44), ಪ್ರಜ್ವಲ ಘತ್ತರಗಿ (19), ಪುಂಡಲಿಂಗ ಯಂಕಂಚಿ (21) ಎಂಬವರನ್ನು ಬಂಧಿಸಲಾಗಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ 2 ಬೊಲೆರೊ ವಾಹನ, 2 ದ್ವಿಚಕ್ರ ವಾಹನ ಹಾಗೂ ಮಾರಕಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಳೆದ ಅಕ್ಟೋಬರ್ 13 ರಂದು ಭೀಮಾ ತೀರದ ಅಫಜಲಪುರ ತಾಲೂಕು ಚೌಡಾಪುರದಲ್ಲಿ ಮದರಾ (ಬಿ) ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಗೌಡಪ್ಪಗೌಡ ಬಿರಾದಾರ (57) ಮೇಲೆ ದಾಳಿ ನಡೆಸಲಾಗಿತ್ತು. ಗ್ರಾಮದಲ್ಲಿ ಬಿರಾದಾರ ಮತ್ತು ಯಂಕಂಚಿ ಕುಟುಂಬದ ನಡುವಿನ ಹಳೆಯ ವೈಷಮ್ಯದ ಹಿನ್ನೆಲೆ ಗೌಡಪ್ಪಗೌಡ ಬಿರಾದಾರ ಕಣ್ಣಿಗೆ ಖಾರದ ಪುಡಿ ಹತ್ಯೆ ಮಾಡಲಾಗಿತ್ತು. ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು.
ಇದನ್ನೂ ಓದಿ :ಸಿಸಿಬಿ ಪೊಲೀಸರ ಸೋಗಿನಲ್ಲಿ ಅಪಹರಣ: ಪೊಲೀಸ್ ಭಾತ್ಮೀದಾರನ ಸಹಿತ ಐವರ ಬಂಧನ