ತುಮಕೂರು:ಬೆಂಗಳೂರಿನಲ್ಲಿ ನಡೆಯುತ್ತಿರುವ ರೈತರ ಟ್ರ್ಯಾಕ್ಟರ್ ಜಾಥದಲ್ಲಿ ಪಾಲ್ಗೊಳ್ಳಲು ಯಾವುದೇ ಟ್ರ್ಯಾಕ್ಟರ್ಗಳನ್ನು ತೆಗೆದುಕೊಂಡು ಹೋಗಲು ತುಮಕೂರು ಹೊರವಲಯದ ಟೋಲ್ಗೇಟ್ನಲ್ಲಿ ಅವಕಾಶ ನೀಡುತ್ತಿಲ್ಲ.
ಟೋಲ್ಗೇಟ್ ಬಳಿ ಟ್ರಾಕ್ಟರ್ಗಳಿಗೆ ನಿರ್ಬಂಧ: ಕಾದು ಕಾದು ಸುಸ್ತಾದ ರೈತ
ತುಮಕೂರು ಹೊರವಲಯದ ಕ್ಯಾತ್ಸಂದ್ರ ಟೋಲ್ ಗೇಟ್ ಬಳಿ ಟ್ರಾಕ್ಟರ್ಗಳಿಗೆ ನಿರ್ಬಂಧ ಹೇರಿದ್ದು, ರೈತರಿಗೆ ಟ್ರ್ಯಾಕ್ಟರ್ಗಳನ್ನು ತೆಗೆದುಕೊಂಡು ಹೋಗಲು ಅವಕಾಶ ನೀಡುತ್ತಿಲ್ಲ.
ಇನ್ನೊಂದೆಡೆ ಯಾವುದೇ ರೀತಿಯ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಮುಂದಾಗದ ಕೆಲವು ರೈತರು ಟ್ರ್ಯಾಕ್ಟರ್ಗಳನ್ನು ಕೃಷಿ ಕೆಲಸಗಳಿಗೆ ತೆಗೆದುಕೊಂಡು ಹೋಗಲು ಕೂಡ ಸಾಧ್ಯವಾಗುತ್ತಿಲ್ಲ. ತುಮಕೂರು ಹೊರವಲಯದ ಕ್ಯಾತ್ಸಂದ್ರ ಟೋಲ್ ಗೇಟ್ ಮೂಲಕ ಟ್ರ್ಯಾಕ್ಟರ್ ನೊಂದಿಗೆ ಜಮೀನಿನ ಕೆಲಸಕ್ಕೆ ತೆರಳುತ್ತಿದ್ದ ರೈತರಿಗೂ ಸಹ ಪೊಲೀಸರು ಅಡ್ಡಗಟ್ಟಿ ವಾಪಸ್ ಕಳುಹಿಸುತ್ತಿರುವ ದೃಶ್ಯಗಳು ಕಂಡುಬಂದಿವೆ.
ದಾವಣಗೆರೆಯಿಂದ ರಾಮನಗರಕ್ಕೆ ಹೊಸ ಟ್ರ್ಯಾಕ್ಟರ್ ಅನ್ನು ರೈತರೊಬ್ಬರಿಗೆ ಕೊಡಲು ಹೋಗುತ್ತಿದ್ದವರನ್ನು ಕೂಡ ಪೊಲೀಸರು ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ದಾವಣಗೆರೆಯ ಶಿವಣ್ಣ ಎಂಬುವರು ಮುಂಜಾನೆ 4 ಗಂಟೆಯಿಂದಲೂ ಟೋಲ್ ಗೇಟ್ ಬಳಿಯೇ ಟ್ರ್ಯಾಕ್ಟರ್ ನಿಲ್ಲಿಸಿಕೊಂಡು ನಿಂತಿದ್ದಾರೆ.