ತುಮಕೂರು : ಅರಣ್ಯದಿಂದ ಬೇಟೆಯಾಡಿ ತಂದ ಮೊಲದ ಕಿವಿಗೆ ಓಲೆ ಹಾಕಿ ಬಳಿಕ ವಿಶೇಷ ಪೂಜೆ ಮಾಡಿ ಪುನಃ ಅರಣ್ಯಕ್ಕೆ ಬಿಡುವ ಮೂಲಕ ವಿಶಿಷ್ಟ ಸಂಪ್ರದಾಯದ ಸಂಕ್ರಾಂತಿ ಹಬ್ಬವನ್ನು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಸೀಗೆಬಾಗಿ ಗ್ರಾಮಸ್ಥರು ಆಚರಿಸಿದರು.
ವರದರಾಜಸ್ವಾಮಿ ಹಾಗೂ ವಿವಿಧ ದೇವರುಗಳಿಗೆ ಪೂಜೆ ಸಲ್ಲಿಕೆ: ಪ್ರಸ್ತುತ ವರ್ಷದ ಪ್ರಥಮ ಹಬ್ಬವಾಗಿ ಆಚರಿಸುವ ಈ ಹಬ್ಬಕ್ಕೆ ಮೂರು ದಿನದ ಮೊದಲೇ ಗ್ರಾಮದ ಕೆಲವರು ಕಾಡಿಗೆ ಹೋಗಿ ಮೊಲವನ್ನು ಜೀವಂತವಾಗಿ ಬೇಟೆಯಾಡಿ ತರುತ್ತಾರೆ. ಸುರಕ್ಷಿತವಾಗಿ ಅದನ್ನು ಕಾಪಾಡಿಕೊಂಡು ಬಂದಿರುತ್ತಾರೆ. ಅಲ್ಲದೇ, ಅದರ ಕಿವಿಗೆ ಓಲೆಯೊಂದನ್ನು ಕೂಡ ಹಾಕುತ್ತಾರೆ. ಸಂಕ್ರಾಂತಿ ಹಬ್ಬದಂದು ವಿಶೇಷವಾಗಿ ಪೂಜೆ ಸಲ್ಲಿಸಿ, ಹಬ್ಬದ ಮರುದಿನ ಸಂಜೆ ವರದರಾಜಸ್ವಾಮಿ ದೇಗುಲದ ಆವರಣದಿಂದ ವರದರಾಜಸ್ವಾಮಿ ಹಾಗೂ ವಿವಿಧ ದೇವರುಗಳಿಗೆ ಪೂಜೆ ಸಲ್ಲಿಸುತ್ತಾರೆ.
ಮೊಲ ಓಡುವ ದಿಕ್ಕಿನಲ್ಲಿ ಉತ್ತಮ ಮಳೆಯಾಗುವ ನಂಬಿಕೆ:ನೂರಾರು ಮಂದಿ ಸಮ್ಮುಖದಲ್ಲಿ ಮೊಲಕ್ಕೆ ವಿಶೇಷ ಪೂಜೆ ಸಲ್ಲಿಸಿ ಕಿವಿಗೆ ಓಲೆ ಹಾಕಿದ್ದ ಮೊಲವನ್ನು ಪುನಃ ಕಾಡಿಗೆ ಬಿಡುತ್ತಾರೆ. ಅದು ಯಾವ ದಿಕ್ಕಿಗೆ ಓಡುತ್ತದೆಯೋ ಆ ದಿಕ್ಕಿನಲ್ಲಿ ಉತ್ತಮ ಬೆಳೆಯಾಗುತ್ತದೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿ ಇಂದಿಗೂ ಮುಂದುವರೆದಿದೆ. ಅನೇಕ ವರ್ಷಗಳಿಂದ ಇಂಥದೊಂದು ವಿಭಿನ್ನವಾದ ಸಾಂಪ್ರದಾಯಿಕ ಆಚರಣೆ ಇಲ್ಲಿ ನಡೆದುಕೊಂಡು ಬರುತ್ತಿದ್ದು, ಗ್ರಾಮಸ್ಥರು ಕೂಡ ಅಪಾರ ನಂಬಿಕೆಯಿಂದ ಇದನ್ನು ಆಚರಿಸಿಕೊಂಡು ಬರುತ್ತಿದ್ದಾರೆ.
ಬೆಳಗಾವಿ:ಕಾಗವಾಡ ತಾಲೂಕಿನ ಐನಾಪುರ ಸಿದ್ದೇಶ್ವರ ಜಾತ್ರೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ದೇವಸ್ಥಾನ ಆವರಣದಲ್ಲಿ ಸಿದ್ದೇಶ್ವರ ಪಲ್ಲಕ್ಕಿ ಉತ್ಸವ ವೈಭವದಿಂದ ನೆರವೇರಿತು. ಭಂಡಾರದೊಡೆಯ ಎಂಬ ಪ್ರಖ್ಯಾತಿ ಹೊಂದಿರುವ ಗಡಿ ಭಾಗದ ಈ ದೇವಾಲಯದ ಜಾತ್ರಾ ಮಹೋತ್ಸವದಲ್ಲಿ ಹಲವು ಗ್ರಾಮದ ಪಲ್ಲಕ್ಕಿ ಉತ್ಸವ ಭಾಗವಹಿಸುವುದು ವಾಡಿಕೆಯಾಗಿದೆ.