ತುಮಕೂರು: ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಲು ಮಹಮ್ಮದ್ ನಲಪಾಡ್ ಹ್ಯಾರಿಸ್ಗೆ ಅವಕಾಶ ಕೊಟ್ಟು ಅತಿ ಹೆಚ್ಚು ಮತಗಳನ್ನು ಪಡೆದ ನಂತರ ಅನರ್ಹಗೊಳಿಸಿರುವ ಪಕ್ಷದ ತೀರ್ಮಾನದ ಬಗ್ಗೆ ರಾಜ್ಯ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ರಾಜೇಂದ್ರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತುಮಕೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂತಹ ಗೊಂದಲಗಳನ್ನು ಆದಷ್ಟು ಬೇಗ ನಿವಾರಣೆ ಮಾಡಬೇಕು. ನಲಪಾಡ್ ಅವರನ್ನು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಅಥವಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವ ಬಗ್ಗೆ ಪಕ್ಷದ ಹಿರಿಯ ಮುಖಂಡರು ನಿರ್ಧರಿಸಬೇಕು ಎಂದು ಮನವಿ ಮಾಡಿದ್ದಾರೆ.