ತುಮಕೂರು :ಕಾಂಗ್ರೆಸಿಗರು ಅರವತ್ತೈದು ವರ್ಷಗಳ ಕಾಲ ರಾಜ್ಯ ಲೂಟಿ ಮಾಡಿದ್ದಾರೆ. ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಇವರು ಅದ್ಯಾವ ಮುಖ ಇಟ್ಟುಕೊಂಡು ಪೋಸ್ಟರ್ ಅಂಟಿಸುತ್ತಾರೆ ಗೊತ್ತಿಲ್ಲ. ದೆಹಲಿಯಿಂದ ಹಿಡಿದು ಕರ್ನಾಟಕದ ನಾಯಕರವರೆಗೆ ಹೆಚ್ಚಿನವರು ಜೈಲಿಗೆ ಹೋಗಿ ಬಂದು, ಬೇಲಿನಲ್ಲಿ ಹೊರಗಿರುವವರು ಎಂದು ಸಿದ್ದಗಂಗಾ ಮಠದಲ್ಲಿ ಸಚಿವ ಆರ್ ಅಶೋಕ ವಾಗ್ದಾಳಿ ನಡೆಸಿದರು.
ಸಿಎಂ ಬೊಮ್ಮಾಯಿ ಮೇಲೆ ಲೋಕಾಯುಕ್ತ ಆಗಲಿ ಎಸಿಬಿ ಆಗಲಿ ಒಂದು ಕೇಸು ದಾಖಲಾಗಿಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವರ ವಿರುದ್ಧ 65 ಕೇಸ್ ದಾಖಲಾಗಿತ್ತು. ಡಿ ಕೆ ಶಿವಕುಮಾರ್ ಅವರು ಜೈಲಿನಿಂದ ಇವಾಗ ತಾನೆ ಹೊರಗಡೆ ಬಂದಿದ್ದಾರೆ. ಇಂಥವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಎಂದರೆ ದೆವ್ವದ ಬಾಯಲ್ಲಿ ಭಗವದ್ಗೀತೆ ಹೇಳಿದಾಗೆ ಎಂದು ಲೇವಡಿ ಮಾಡಿದರು.
ಅಣ್ಣಾ ಹಜಾರೆ ಅವರು ಬಂದು ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ಕೇಳಬಹುದು, ಆದರೆ ಈ ಕಾಂಗ್ರೆಸ್ಸಿಗರು ಮಾಡಿದರೆ ಹೇಗೆ. ಹಿಂದೆ ವೀರೇಂದ್ರ ಪಾಟೀಲ್ ಸಿಎಂ ಆಗಿದ್ದಾಗ ಅವರ ಮೇಲೆ ಆರೋಪ ಮಾಡಿ ಕೆಳಗಿಳಿಸಿದರು. ಈಗ ಬೊಮ್ಮಾಯಿ ಅವರ ಮೇಲೆ ಆರೋಪ ಮಾಡುತ್ತಿದ್ದಾರೆ. ಕೆಂಗಲ್ ಹನುಮಂತಯ್ಯನವರು ಇದ್ದಾಗಲೂ ಕೂಡ ಅವರ ಮೇಲೆ ಅವರು ಆರೋಪ ಮಾಡಿದ್ದರು. ಈ ತರದ ಸಮುದಾಯಗಳ ಮೇಲೆ ಅಟ್ಯಾಕ್ ಮಾಡುವುದು ಒಂದು ಚಾಳಿ ಎಂದು ಹರಿಹಾಯ್ದರು.