ತುಮಕೂರು:ರಾತ್ರಿ ವೇಳೆ, ತುಮಕೂರಿನ ಶಿರಾ ತಾಲೂಕಿನ ಬಸ್ ನಿಲ್ದಾಣಕ್ಕೆ ಬಸ್ ಬಿಡುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಬೈಪಾಸ್ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಶಿರಾ ನಿಲ್ದಾಣಕ್ಕೆ ಪ್ರತಿ ಬಸ್ ಸಂಚರಿಸಬೇಕು ಎಂದು ಆಗ್ರಹಿಸಿ ರಸ್ತೆ ತಡೆ: ಪ್ರತಿಭಟನೆ - protest
ಶಿರಾ ಬಸ್ ನಿಲ್ದಾಣಕ್ಕೆ ಬರಲು ಬಸ್ ಚಾಲಕರು ಹಿಂದೇಟು ಹಾಕಿದ್ದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಬಸ್ ಸಂಚಾರಕ್ಕೆ ಅಡ್ಡಿಪಡಿಸಿ ಪ್ರತಿಭಟನೆ ನಡೆಸಿದರು. ಇದರಿಂದ ಬೈಪಾಸ್ ರಸ್ತೆಯಲ್ಲಿ ಕೆಲಹೊತ್ತು ಸಂಚಾರ ದಟ್ಟಣೆ ಉಂಟಾಯಿತು.
ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕೆಲವು ಸಂಘಟನೆಗಳ ಮುಖಂಡರು ಬೈಪಾಸ್ನಲ್ಲಿ ಸಾಗುತ್ತಿದ್ದ ಬಸ್ಗಳನ್ನು ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದರು. ಬೆಂಗಳೂರಿನಿಂದ ಹೊರಟ ಬಸ್ಗಳಲ್ಲಿ ಪ್ರಯಾಣಿಸಿದ ಸಂಘಟನೆಗಳ ಕಾರ್ಯಕರ್ತರು ಶಿರಾ ನಗರಕ್ಕೆ ಹೋಗಲು ನಿರಾಕರಿಸಿದ ಚಾಲಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬಸ್ ಸಂಚಾರಕ್ಕೆ ಅಡ್ಡಿಪಡಿಸಿದರು.
ಈ ಮೊದಲು ರಾತ್ರಿ ವೇಳೆ, ಬಸ್ ನಿಲ್ದಾಣಕ್ಕೆ ಬರುತ್ತಿದ್ದ ಬಸ್ಗಳು ಏಕಾಏಕಿ ಸಂಚಾರ ನಿಲ್ಲಿಸಿದ್ದು, ಬಸ್ ನಿಲ್ದಾಣಕ್ಕೆ ಬಾರದೇ ಬೈಪಾಸ್ನಲ್ಲಿ ಸಾಗುತ್ತಿವೆ. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿಷಯ ತಿಳಿದು ಪ್ರತಿಭಟನಾ ಸ್ಥಳಕ್ಕೆ ಬಂದ ಶಿರಾ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.