ತುಮಕೂರು:ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ವಾಹನ ಚಾಲಕರು ಹಾಗೂ ವಾಟರ್ಮನ್ಗಳಿಗೆ ಪೌರಕಾರ್ಮಿಕರ ಮಾದರಿಯಲ್ಲಿ ನೇರ ವೇತನ ಜಾರಿಗೊಳಿಸುವಂತೆ ಒತ್ತಾಯಿಸಿ ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ವಾಹನ ಚಾಲಕರ ಸಂಘದ ವತಿಯಿಂದ ಮಹಾನಗರಪಾಲಿಕೆಯ ಎದುರು ಮೌನ ಪ್ರತಿಭಟನಾ ಧರಣಿ ನಡೆಸಲಾಗಿದೆ.
ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ವಾಹನ ಚಾಲಕರಿಂದ ಪ್ರತಿಭಟನೆ ರಾಜ್ಯದ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಹಾಗೂ ಪಾಲಿಕೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ತ್ಯಾಜ್ಯ ಸಾಗಿಸುವ ವಾಹನ ಚಾಲಕರು ಹಾಗೂ ವಾಟರ್ಮೆನ್ ಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಅವರಿಗೆ ಹೊರಗುತ್ತಿಗೆ ಪದ್ಧತಿಯಲ್ಲಿ ವೇತನ ನೀಡುತ್ತಿದ್ದು ಈ ಮಾದರಿಯನ್ನು ರದ್ದುಪಡಿಸಿ, ನೇರ ವೇತನ ಜಾರಿ ಮಾಡುವಂತೆ ಪ್ರತಿಭಟನೆ ನಡೆಸಲಾಯಿತು.
ರಾಜ್ಯದಲ್ಲಿ ಸುಮಾರು 18 ಸಾವಿರಕ್ಕೂ ಹೆಚ್ಚು ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಗರದ ಸ್ವಚ್ಛತೆ ನಿರ್ವಹಣೆಯಲ್ಲಿ ತ್ಯಾಜ್ಯ ಸಾಗಾಣಿಕೆಯ ಚಾಲಕರ ಪಾತ್ರ ದೊಡ್ಡದಾಗಿದ್ದು, ಪೌರಕಾರ್ಮಿಕರಿಗೆ ಸಮಾನವಾಗಿ ಕರ್ತವ್ಯ ನಿರ್ವಹಿಸಲಾಗುತ್ತಿದೆ. ಅದೇ ರೀತಿ ವಾಟರ್ಮೆನ್ ಗಳು ಸಹ ಯಾವುದೇ ಸೇವಾ ಭದ್ರತೆಯಿಲ್ಲದೆ ಕನಿಷ್ಠ ವೇತನಕ್ಕೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ಆಧಾರಿತ ನೌಕರರನ್ನು ನೇರವೇತನಕ್ಕೆ ಒಳಪಡಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಕಲೀಂ ಅಹಮದ್, ಗುತ್ತಿಗೆ ಆಧಾರದಲ್ಲಿ ನಮಗೆ ಸಂಬಳ ನೀಡುತ್ತಿದ್ದಾರೆ. ಪೌರ ಕಾರ್ಮಿಕರಿಗೆ ನೇರ ವೇತನ ಮಾಡಲಾಗುತ್ತಿದೆ. ಅದೇ ರೀತಿ ನಮಗೂ ಸಹ ಗುತ್ತಿಗೆ ಪದ್ಧತಿಯ ವೇತನವನ್ನು ರದ್ದುಮಾಡಿ, ನೇರ ವೇತನ ಮಾಡುವಂತೆ ರಾಜ್ಯಾದ್ಯಂತ ಏಕಕಾಲದಲ್ಲಿ ಇಂದು ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಪೌರಕಾರ್ಮಿಕರ ರೀತಿಯಲ್ಲಿಯೇ ನಾವು ಸಹ ಸ್ವಚ್ಛತೆಗೆ ಹೆಚ್ಚು ಗಮನ ನೀಡಿ, ಕಸವನ್ನು ಸಾಗಣೆ ಮಾಡುತ್ತೇವೆ. ಹಾಗಾಗಿ ನಮಗೆ ನೇರ ವೇತನ ನೀಡುವಂತೆ ಪ್ರತಿಭಟನೆ ನಡೆಸಲಾಗುತ್ತಿದೆ. ಒಂದು ವೇಳೆ, ನಮ್ಮ ಪ್ರತಿಭಟನೆಗೆ ಸ್ಪಂದಿಸದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಸಿದರು.