ತುಮಕೂರು:ಸರ್ಕಾರದ ನೀತಿಗಳನ್ನು ವಿರೋಧಿಸಿ ವಿವಿಧ ರೈತಪರ ಸಂಘಟನೆಗಳಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ, ಸಹಜ ಬೇಸಾಯ ಶಾಲೆ ಮತ್ತು ಗ್ರಾಮ ಸೇವಾ ಸಂಘಗಳಿಂದ ಪ್ರತಿಭಟನೆ ನಡೆಸಿ, ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ರೈತರನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿದರು.
ಸರ್ಕಾರದ ನೀತಿ ಖಂಡಿಸಿ ವಿವಿಧ ರೈತ ಸಂಘಟನೆಗಳಿಂದ ಪ್ರತಿಭಟನೆ - ತುಮಕೂರಿನಲ್ಲಿ ವಿವಿಧ ರೈತ ಸಂಘನೆಗಳಿಂದ ಪ್ರತಿಭಟನೆ
ರೈತರ ವಿರೋಧಿ ಕಾಯ್ದೆಗಳನ್ನು ಸರ್ಕಾರ ಜಾರಿಗೆ ತರುವ ಮೂಲಕ ರೈತರನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ, ಸಹಜ ಬೇಸಾಯ ಶಾಲೆ ಮತ್ತು ಗ್ರಾಮ ಸೇವಾ ಸಂಘಗಳಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ರೈತ ಮುಖಂಡ ಗೋವಿಂದರಾಜು, ಕೇಂದ್ರ ಸರ್ಕಾರದ ನೀತಿ ಆಯೋಗ ರೈತರು ಭೂಮಿಯನ್ನು ಬೀಳು ಬಿಟ್ಟಿದ್ದಾರೆ ಎಂಬ ಕಾರಣವನ್ನು ಇಟ್ಟುಕೊಂಡು ಭೂಮಿ ಗುತ್ತಿಗೆ ಕರಾರು ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿದೆ. ಆ ಮೂಲಕ ರೈತರ ಫಲವತ್ತಾದ ಭೂಮಿಯನ್ನು ಕಿತ್ತುಕೊಂಡು ದೊಡ್ಡ ದೊಡ್ಡ ಕಂಪನಿಗಳಿಗೆ ಕೊಡುವಂತಹ ಹುನ್ನಾರ ಮಾಡುತ್ತಿದೆ ಎಂದು ಆರೋಪಿಸಿದರು. ರೈತರ ಮೇಲೆ ಸರ್ಕಾರಕ್ಕೆ ಗೌರವವಿದ್ದರೆ ರೈತರು ಭೂಮಿಯನ್ನು ಏಕೆ ಬೀಳು ಬಿಟ್ಟಿದ್ದಾರೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಬೇಕು. ಇಂದು ರೈತರು ಬೆಳೆದಂತಹ ಬೆಳೆಗೆ ವೈಜ್ಞಾನಿಕ ಬೆಂಬಲ ಬೆಲೆಯಿಲ್ಲದ ಕಾರಣ ಭೂಮಿಯನ್ನು ಬೀಳು ಬಿಟ್ಟಿದ್ದಾರೆ. ಬೀಳು ಬಿಟ್ಟ ಕಾರಣವನ್ನು ಮುಂದಿಟ್ಟುಕೊಂಡು ಸರ್ಕಾರ ಈ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ರೈತರ ಕೈಯಲ್ಲಿರುವ ಭೂಮಿಯನ್ನು ಕಿತ್ತುಕೊಂಡು ಬಹುರಾಷ್ಟ್ರೀಯ ಕಂಪನಿಗಳಿಗೆ ನೀಡುವ ಪ್ರಯತ್ನ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಸುಮಾರು 25 ಲಕ್ಷ ಬಗರ್ ಹುಕುಂ ಸಾಗುವಳಿದಾರರು ಜೀವನ ನಡೆಸುತ್ತಿದ್ದಾರೆ. ತುಮಕೂರು ಜಿಲ್ಲೆಯಲ್ಲಿ 1,25,000 ಮಂದಿ 2.5 ಲಕ್ಷ ಎಕರೆ ಭೂ ಸ್ವಾದೀನದಲ್ಲಿ ಬಗರ್ ಹುಕುಂ ಸಾಗುವಳಿ ನಡೆಸುತ್ತಿದ್ದಾರೆ. ಈ ಬಗರ್ ಹುಕುಂ ಸಾಗುವಳಿಯನ್ನು ಸಕ್ರಮ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ವಿಧಾನಸೌಧ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.